11.30.2013

ಸಮಾಜವಾದದ ಕೊನೆಯ ಕಿಲ್ಲೆ: ಕ್ಯೂಬಾ

ಕ್ಯೂಬಾದ ರಾಜಧಾನಿ ಹವಾನಾ ವಿಮಾನ ನಿಲ್ದಾಣದಲ್ಲಿ ಬಂದಿಳಿದಾಗ ಮೂರು ದಶಕಗಳ ಕನಸು ನನಸಾಯಿತು. ದಕ್ಷಿಣ ಭಾರತದ ಹವಾಮಾನ, ತೆಂಗಿನ ಮರಗಳ ಸಾಲು ನಮ್ಮನ್ನು ಸ್ವಾಗತಿಸಿದವು. ಪ್ರವೇಶಪತ್ರದಲ್ಲಿ ಬೇರೆ ಯಾವ ದೇಶದಲ್ಲೂ ಕೇಳದ ಒಂದು ಪ್ರಶ್ನೆಯಿತ್ತು: ‘ನೀವು ಯಾವುದಾದರೂ ಅಶ್ಲೀಲ ಸಾಮಗ್ರಿಯನ್ನು ತರುತ್ತಿದ್ದೀರಾ?’  ಈ ಪ್ರಶ್ನೆಗೆ ಕಾರಣ ಏನಿರಬ­ಹು­ದೆಂದು ಯೋಚಿಸಿದಾಗ ಹೊಳೆ­ಯಿತು: ಅಮೆರಿಕ, ಜಗತ್ತಿನ ರಾಷ್ಟ್ರಗಳನ್ನು ವಶಪಡಿಸಿ­ಕೊಳ್ಳಲು ಬಳಸುವ ಅತ್ಯಂತ ಬಲಿಷ್ಠ ಆಯುಧ­ವೆಂದರೆ ಅಶ್ಲೀಲತೆ.
ನಮ್ಮ ದೇಶದಲ್ಲಿ ಈ ಬಗ್ಗೆ ಯಾವುದೇ ಪ್ರತಿಬಂಧವಿಲ್ಲದ್ದರಿಂದಲೇ ಹಾಲಿ­ವುಡ್ಡೀ­ಕೃತ ಬಾಲಿವುಡ್ ಸಿನಿಮಾ ಅಶ್ಲೀಲತೆ­ಯನ್ನು ಸಂಭ್ರಮಿಸುತ್ತಾ ಇವತ್ತು ಪವಿತ್ರ ಭರತ­ಭೂಮಿಯ ಮಹಾನ್ ಸಂಸ್ಕೃತಿಯ ಟ್ರೇಡ್‌­ಮಾರ್ಕ್ ಆಗಿ ವಿಜೃಂಭಿಸುತ್ತಿದೆ. ಆದರೆ ಕ್ಯೂಬಾ ಈ ಬಗ್ಗೆ ಜಾಗರೂಕವಾಗಿರುವುದು ಅಲ್ಲಿನ ಸರ್ಕಾರದ ವಿವೇಕದ ಕುರುಹಾಗಿ ಕಾಣುತ್ತದೆ.
ವಿಮಾನ ನಿಲ್ದಾಣದ ಭದ್ರತಾ ವ್ಯವಸ್ಥೆ ತುಂಬಾ ಬಿಗಿ ಎಂಬುದೂ ಅನುಭವವಾಯಿತು. ವಿದ್ಯುತ್‌ಚಾಲಿತ ಸಾಮಾನುಗಳನ್ನು ಕ್ಯೂಬಾ­ದೊಳಗೆ ತರುವಹಾಗಿಲ್ಲ. ನಮ್ಮ ಜೊತೆಗಾರ­ರೊಬ್ಬರು ಸ್ವತಃ ಅಡುಗೆ ಮಾಡಿಕೊಳ್ಳುವ ಕಠೋರ ಸಸ್ಯಾಹಾರಿಗಳು.  ಅವರು ಅಂಟಾ­ರ್ಟಿಕಾಕ್ಕೆ ಹೋದರೂ ಅನ್ನದ ಕುಕ್ಕರ್, ಅಕ್ಕಿ ಮತ್ತು ಉಪ್ಪಿನಕಾಯನ್ನು ಹೊತ್ತುಕೊಂಡು ಹೋಗು­ವಂತಹವರು.
ಆದರೆ ಹವಾನಾ ವಿಮಾನ ನಿಲ್ದಾಣದ ಭದ್ರತಾ ವ್ಯವಸ್ಥೆಯವರು ಅವರ ಆ ಅಕ್ಷಯಪಾತ್ರೆಯನ್ನು ಗಂಟೆಗಟ್ಟಲೆ ತಡೆಹಿಡಿದುಬಿಟ್ಟರು.  ತನ್ನ ನಾಯಕನ ಮೇಲೆ ೬೦೦ಕ್ಕೂ ಹೆಚ್ಚು ಕೊಲೆಯ ಪ್ರಯತ್ನ ಮಾಡಿ­ರುವ ನೆರೆಯ ಶತ್ರುರಾಷ್ಟ್ರ ಅಮೆರಿಕದ ಹಲ್ಲೆಯ ನಿರಂತರ ಭೀತಿಯಲ್ಲಿ ಬಾಳುತ್ತಿರುವ ದೇಶದಲ್ಲಿ ಇಂಥ ಅತೀವ ಭದ್ರತಾ ವ್ಯವಸ್ಥೆ ಸಕಾರಣ ಅನಿಸಿತು.
ಹವಾನಾ ನಗರ ಹೊಕ್ಕೊಡನೆ ಒಂದು ಆಶ್ಚರ್ಯ ನಮ್ಮನ್ನು ಕಾಯುತ್ತಿರುತ್ತದೆ. ಅಲ್ಲಿ ಓಡಾಡುವ ಹಳೇ ಮಾಡಲ್ಲಿನ ಕಾರುಗಳನ್ನು ನೋಡಿದಾಗ ಈ ದೇಶ ಮೂರು ದಶಕ ಹಿಂದಿದೆಯೇನೋ ಎಂಬ ಅನುಮಾನ ಬಂದರೂ ನಗರದ ನಿಯಮಬದ್ಧ ಸಂಚಾರ ವ್ಯವಸ್ಥೆ ಮತ್ತು ರಸ್ತೆಗಳ ಅಚ್ಚುಕಟ್ಟು ಮುಂದುವರಿದ ರಾಷ್ಟ್ರ­ಗಳನ್ನೂ ಮೀರಿಸುವಂತಿವೆ. ಹಳೆಯ ಮಾಡಲ್ಲಿನ ಕಾರುಗಳು ಇನ್ನೂ ಚೆನ್ನಾಗಿಯೇ ಓಡಾಡುತ್ತಿವೆ. ಮಾರ್ಕೆಟ್ಟಿಗೆ ಬಂದ ಹೊಸ ಮಾಡಲ್ ಕಾರುಗಳು ನಮ್ಮ ರಸ್ತೆಗೆ ಬರುವುದೇ ಪ್ರಗತಿಯ ಸಂಕೇತ ಎಂಬ ಭ್ರಮೆಗೊಳಗಾಗಿರುವ ನಮಗೆ ಕ್ಯೂಬಾದ ವಿಕಾಸದ ಪರಿಕಲ್ಪನೆಯೇ ವಿಭಿನ್ನ­ವಾದುದೆಂದು ಅರಿವಾಗತೊಡಗುತ್ತದೆ.
ಹಲವು ಜನಾಂಗೀಯ ಲಕ್ಷಣಗಳಿರುವ ಮತ್ತು ಮಿಶ್ರ ಲಕ್ಷಣಗಳುಳ್ಳ ಜನ ಕಣ್ಣಿಗೆ ಬೀಳುತ್ತಾರೆ. ಕ್ಯೂಬಾ ಮಿಶ್ರ ಸಂಸ್ಕೃತಿಯ ರಾಷ್ಟ್ರ. ಮೂಲ­ನಿವಾಸಿಗಳಾದ ಅಮರಿಕನ್ ಇಂಡಿಯನ್ನರು, ವಸಾಹತು ಕಟ್ಟಿದ ಸ್ಪೇನಿನವರು, ಗುಲಾಮರಾಗಿ ಬಿಳಿಯರು ಕರೆತಂದ ನೀಗ್ರೋಗಳು ಮಾತ್ರವಲ್ಲದೆ ಚೀನಾ ಮತ್ತು ವಿಯೆಟ್ನಾಂ ಮೂಲದವರೂ ಗಣನೀಯ ಸಂಖ್ಯೆಯಲ್ಲಿದ್ದಾರೆ. ಹವಾನಾ­ದಲ್ಲಿ­ರುವ ಚೀನಿ ಜನಗಳಿಗಾಗಿ ಸ್ಥಳೀಯ ಸರ್ಕಾರ­ದವರು ಬಹು ದೊಡ್ಡ ಸ್ಮಶಾನವೊಂದನ್ನು ಕಟ್ಟಿಕೊಟ್ಟಿದ್ದಾರೆ. ವರ್ಣ ಮತ್ತು ಜನಾಂಗ ವೈಷಮ್ಯಗಳ ಸುಳಿವು ಕಾಣುವುದೇ ಇಲ್ಲ.
ನಮಗೆ ಹವಾನಾದಲ್ಲಿ ದುಭಾಷಿಗಳಾಗಿ ಇಬ್ಬರು ಹುಡುಗಿಯರಿದ್ದರು. ಅವರಲ್ಲಿ ಮೊದಲ­ನೆ­ಯವಳಾದ ದೆಯಾನೀರಾ ಕೇರಳ ಅಥವಾ ಶ್ರೀಲಂಕಾದ ಕೃಷ್ಣಸುಂದರಿಯಂತಿದ್ದಳು. ಆದರೆ ಅವಳ ಮೂಲವನ್ನು ವಿಚಾರಿಸಲಾಗಿ ತನ್ನ ಪೂರ್ವಜರ ಪಟ್ಟಿಯಲ್ಲಿ ನೈಜೀರಿಯಾದವರು, ಚೀನಿಯರು ಮತ್ತು ಸ್ಪೇನಿನವರು ಇದ್ದಾರೆ ಎಂದಳು. ಇನ್ನೊಬ್ಬ ದುಭಾಷಿ ಹೈಡಿ,  ಹಸಿರು­ಕಣ್ಣಿನ ಶ್ವೇತಸುಂದರಿ. ಅವಳು ಬಿಳಿಯ ಮೂಲ­ದವಳೇ ಎಂದು ಕೇಳಿದಾಗ ದೆಯಾನೀರಾ ಹೇಳಿದಳು: ‘ಹಾಗೆ ಹೇಳಲು ಬರುವುದಿಲ್ಲ. ಏಕಜನಾಂಗ ಮೂಲದವರ ಹಾಗೆ ತೋರುವ ಹೈಡಿಯಂಥವರ ಡಿ.ಎನ್.ಎ. ವಿಶ್ಲೇಷಣೆ ಮಾಡಿ­ದರೆ ಅಂಥವರಲ್ಲೂ ಜನಾಂಗೀಯ ಮಿಶ್ರಣ­ವಿದೆ­ಯೆಂದು ಗೊತ್ತಾಗುತ್ತದೆ.’ ಮನುಷ್ಯ ಜೀವಿ­ಗಳೆಲ್ಲರೂ ಮಿಶ್ರತಳಿಯವರೆಂದು ನಂಬುವ ನನಗೆ ಸಂತೋಷವಾಯಿತು.

4.28.2012

ಬೆಂಗಳೂರು ನಗರ ಕುಡಿವ ನೀರಿನ ಸಮಸ್ಯೆ ಶಾಶ್ವತ ಪರಿಹಾರಕ್ಕೆ ನೀರಿನ ಸಮಾವೇಶ

ಬೇಸಿಗೆ ಮಾತ್ರವಲ್ಲ ಮಳೆಗಾಲದಲ್ಲೂ ಬೆಂಗಳೂರಿನ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗುತ್ತಿದೆ. ಒಂದೆಡೆ ಹೆಚ್ಚುತ್ತಿರುವ ಜನಸಂಖ್ಯೆ, ಮತ್ತೊಂದೆಡೆ ನೀರು ಸರಬರಾಜಿನ ಅವ್ಯವಸ್ಥೆಯಿಂದಾಗಿ ಮುಂದಿನ ದಿನಗಳಲ್ಲಿ ಶುದ್ಧ ಕುಡಿಯುವ ನೀರಿನ ಸಾಧ್ಯತೆಗಳು ಇವೆಯಾ ಎಂಬ ಅನುಮಾನ ಕಾಡುತ್ತಿದೆ. ನೀರಿನ ಹೆಸರಲ್ಲಿ ರಾಜಕೀಯ ಮತ್ತು ಹಣ ಮಾಡುವ ದಂಧೆ ಹೆಚ್ಚಳವಾಗುತ್ತಿದೆ.


ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಪ್ರಕಾರವೇ 2015ರ ವೇಳೆಗೆ ಎಲ್ಲಾ ಯೋಜನೆಗಳು ಪೂರ್ಣವಾದ ಮೇಲೂ ಲಭ್ಯವಾಗುವ ನೀರು ದಿನಕ್ಕೆ 1470 ದಶಲಕ್ಷ ಲೀಟರ್ಗಳು ಮಾತ್ರ. ಇದೇ ಮಂಡಳಿಯ ಅಂದಾಜಿನ ಪ್ರಕಾರ 2021ನೇ ಇಸವಿಗೆ ದಿನಕ್ಕೆ 1800 ದಶಲಕ್ಷ ಲೀಟರ್ ಮತ್ತು 2036ನೇ ಇಸವಿಗೆ ದಿನಕ್ಕೆ 2500 ದಶಲಕ್ಷ ಲೀಟರ್ ಅವಶ್ಯಕತೆಯಿದೆ. ಅಂದರೆ ಸರಿಸುಮಾರು ಅರ್ಧ ದಷ್ಟು ನೀರಿನ ಗಂಭೀರ ಕೊರತೆ ಉಂಟಾಗಲಿದೆ. ಸ್ಪಷ್ಟ ಪರ್ಯಾಯಗಳನ್ನು ಕಂಡುಕೊಳ್ಳದಿದ್ದರೆ ನೀರಿಗೆ ಹಾಹಾಕಾರ ಉಂಟಾಗಲಿದೆ.


ಈ ಹಿನ್ನೆಲೆಯಲ್ಲಿ ನೀರಾವರಿ ತಜ್ಞರಾದ ಜಿ.ಎಸ್.ಪರಮಶಿವಯ್ಯನವರು ನೀಡಿರುವ ವರದಿಯಲ್ಲಿ ಸ್ಪಷ್ಟ ಪರ್ಯಾಯಗಳನ್ನು ಗುರುತಿಸಲಾಗಿದೆ. ಈಗ ಎಲ್ಲಾ ಮೂಲಗಳಿಂದ ಲಭ್ಯವಾಗುವ ನೀರಿನ ಪ್ರಮಾಣದಷ್ಟು ನೀರನ್ನು ಬೆಂಗಳೂರಿಗೆ ತರುವ ಸಾಧ್ಯತೆಗಳನ್ನು ಇವರು ಹೇಳಿದ್ದಾರೆ. ಆದ್ದರಿಂದ ಈ ಬಗ್ಗೆ ಚರ್ಚಿಸಿ ಜನಾಂದೋಲನವನ್ನು ರೂಪಿಸುವ ಬಗ್ಗೆ ಮಾರ್ಕ್ಸ್ ವಾದಿ ಕಮ್ಯೂನಿಸ್ಟ್ ಪಕ್ಷವು 29.04.2012ರಂದು(ನಾಳೆ) ನೀರಿನ ಸಮಾವೇಶವನ್ನು ಏರ್ಪಡಿಸಿದೆ.

ಇದರಲ್ಲಿ ನೀರಾವರಿ ತಜ್ಞರಾದ ಜಿ.ಎಸ್.ಪರಮಶಿವಯ್ಯ, ರೈತ ಮುಖಂಡರಾದ ಜಿ.ಸಿ.ಬಯ್ಯಾರೆಡ್ಡಿ ಮುಂತಾದವರು ವಿಷಯದ ಕುರಿತು ಮಾತನಾಡಲಿದ್ದಾರೆ