11.05.2007

ಅಕ್ರಮ-ಸಕ್ರಮ ದುಬಾರಿ ಶುಲ್ಕ - ಸಿಪಿಐ(ಎಂ) ಖಂಡನೆ

05.11.2007

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಅಕ್ರಮ ನಿವೇಶನ ಹಾಗು ಕಟ್ಟಡಗಳನ್ನು ಸಕ್ರಮಗೊಳಿಸಲು ರೂಪಿಸಿರುವ ಯೋಜನೆಯಡಿ ನಿಗದಿಗೊಳಿಸಿರುವ ಶುಲ್ಕಗಳು ದುಬಾರಿಯಾಗಿವೆ ಎಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ) CPIM ಬೆಂಗಳೂರು ಜಿಲ್ಲಾ ಸಮಿತಿಯು ಖಂಡಿಸಿದೆ.

ಅಕ್ರಮ-ಸಕ್ರಮಕ್ಕೆ ಬಿಬಿಎಂಪಿ ನಿಗದಿಪಡಿಸಿರುವ ಶುಲ್ಕಗಳು ಅತೀ ದುಬಾರಿಯಾಗಿದ್ದು, ಒಂದೇ ಕಂತಿನಲ್ಲಿ ಕಟ್ಟಬೇಕೆಂಬ ಕಟ್ಟುಪಾಡು, ಅರ್ಜಿ ಸಲ್ಲಿಸುವಾಗಲೇ ಸಲ್ಲಿಸಬೇಕೆಂಬ ನಿಬಂಧನೆಗಳು ಬಡ, ಕೆಳ ಮಧ್ಯಮ ಹಾಗು ಮಧ್ಯಮ ವರ್ಗದ ಜನತೆ, ನೌಕರರು ಹಾಗು ಕಾರ್ಮಿಕರಿಗೆ ಅಪಾರ ನಷ್ಟವನ್ನುಂಟು ಮಾಡುವ ಯೋಜನೆಯಾಗಿದೆ. ಸಕ್ರಮ-2007 ಪೌರರನ್ನು ದೋಚುವ ಬಿಬಿಎಂಪಿಯ ದುರಾಕ್ರಮ ಹಾಗು ದುಸ್ಸಾಹಸವಾಗಿದೆ. ಈ ಕೂಡಲೇ ದುಬಾರಿ ಶುಲ್ಕಗಳು ಕಡಿತಗೊಳಿಸಬೇಕು, ಕಂತುಗಳಲ್ಲಿ ಪಾವತಿಸಲು ಅನುಮತಿಸಬೇಕು, ಕಾಲ ಮಿತಿಯನ್ನು ವಿಸ್ತರಿಸಬೇಕು, ಈ ಹಿಂದೆ ಸ್ಥಳೀಯ ಸಂಸ್ಥಗಳಿಂದ ಸಕ್ರಮಗೊಳಿಸಿಕೊಳ್ಳಲು ಶುಲ್ಕ ಪಾವತಿಸಿದ್ದಲ್ಲಿ ಅದನ್ನು ಪರಿಗಣಿಸಲು ಕ್ರಮವಹಿಸಬೇಕಾಗಿ ಸಿ.ಪಿ.ಐ.(ಎಂ) ಜಿಲ್ಲಾ ಸಮಿತಿ ಬಿಬಿಎಂಪಿ ಹಾಗು ಸರ್ಕಾರವನ್ನು ಆಗ್ರಹಿಸಿದೆ.

ಪರಿವರ್ತಿತ ಹಾಗು ಅಪರಿವರ್ತಿತ ಭೂಮಿಯಲ್ಲಿ ರಚಿಸಲಾದ ನಿವೇಶನ-ನಿರ್ಮಿಸಲಾದ ಕಟ್ಟಡಗಳಲ್ಲಿನ ಅಕ್ರಮ, ಸೆಟ್ಬ್ಯಾಕ್ ಉಲ್ಲಂಘನೆ, ಹಾಗು ಪ್ಲೋರ್ ಏರಿಯಾ ರೇಷಿಯೋ (FAR) ಅಕ್ರಮಗಳಿಗೆಲ್ಲಾ ಪ್ರತ್ಯೇಕವಾಗಿ ನಿಗದಿಗೊಳಿಸಿರುವ ಶುಲ್ಕಗಳು ಪ್ರತ್ಯೇಕವಾಗಿದ್ದು, ಈ ನಾಲ್ಕರಲ್ಲೂ ನಿಬಂಧನೆಗಳನ್ನು ಉಲ್ಲಂಘಿಸಿದ್ದಲ್ಲಿ ಅಂತಹ ಒಂದೊಂದು ಉಲ್ಲಂಘನೆಗೂ ಶುಲ್ಕಗಳೆಲ್ಲಾ ಒಟ್ಟುಗೂಡಿಸಿದಲ್ಲಿ ಸಕ್ರಮ ಶುಲ್ಕ ಮತ್ತಷ್ಟು ದುಬಾರಿಯಾಗಲಿದೆ.

ಪರಿಣಾಮವಾಗಿ ಜೀವಮಾನವೀಡಿ ದುಡಿದು ನೆತ್ತಿಯ ಮೇಲೊಂದು ಸೂರೆಂದು ಸ್ವಂತ ವಾಸಕ್ಕೆಂದು ಗೃಹ ನಿರ್ಮಿಸಿಕೊಂಡಂತಹ ಸ್ವಂತ ಮನೆ ವಾಸಿಗಳಿಗೆ ಈ ದುಬಾರಿ ಶುಲ್ಕ ಭರಿಸಲು ಸಾಧ್ಯವಾಗದಿದ್ದಲ್ಲಿ ಮನೆಗಳಿಗೆ ಕಲ್ಪಿಸಲಾಗಿರುವ ವಿಧ್ಯುತ್ ಹಾಗು ನೀರಿನ ಸೌಲಭ್ಯ ಕಡಿತಗೊಳಿಸುವ ಎಚ್ಚರಿಕೆಯನ್ನು ಸಹಾ ವಿಧಿಸಿರುವುದು ಬಿಬಿಎಂಪಿಯ ಜನವಿರೋಧಿ ಕ್ರಮವಾಗಿದೆ. ಮನೆ ಕಂದಾಯ, ನೀರು ಹಾಗು ಒಳಚರಂಡಿ ಶುಲ್ಕ ವಿಧ್ಯುತ್ ಭದ್ರತಾ ಠೇವಣಿ ಪಡೆದುಕೊಂಡೆ ಅದಕ್ಕೂ ಮುನ್ನ ಸಂಬಂಧಿತರಿಂದ ಎನ್.ಓ.ಸಿ ಪಡೆದೆ ನೀರು ಹಾಗು ವಿಧ್ಯುತ್ ಸೌಲಭ್ಯವನ್ನು ಕಲ್ಪಸುವುದು, ಅಂತಹದರಲ್ಲಿ ಏಕಾಏಕಿ ಸೆಪ್ಟೆಂಬರ್ 15 ರಿಂದ ಡಿಸೆಂಬರ್ 15, 2007 ರೊಳಗೆ ಕಟ್ಟಬೇಕೆಂಬ ಮೂರು ತಿಂಗಳ ಗಡುವು ನೀಡಿ, ಇಂತಹ ಬೆದರಿಕೆ ಒಡ್ಡುವುದು ಪ್ರಜಾಪ್ರಭುತ್ವ ವಿರೊಧಿ- ಸರ್ವಾಧಿಕಾರಿ ಕ್ರಮವಾಗಿದೆ ಎಂದು ಸಿ.ಪಿ.ಐ.ಎಂ ಖಂಡಿಸುತ್ತದೆ.

ಈ ಅಕ್ರಮ-ಸಕ್ರಮದ ಫಲನುಭವಿಗಳು ದೊಡ್ಡ ಪ್ರಮಾಣದಲ್ಲಿ, ಹೊಸದಾಗಿ ಬಿಬಿಎಂಪಿಗೆ ಸೇರ್ಪಡೆಗೊಂಡಿರುವ ಹಿಂದಿನ ಸಿಎಂಸಿ ಪ್ರದೇಶದಲ್ಲಿ ನಿವೇಶನ ಹಾಗು ಕಟ್ಟಡ ಉಳ್ಳವರಾಗಿರುತ್ತಾರೆ. ಈ ಹಿಂದೆ ಅಲ್ಲಿನ ಸ್ಥಳೀಯ ಸಂಸ್ಥೆಗಳಿಗೆ ಅಲ್ಲಿನ ಅಗತ್ಯ ಶುಲ್ಕ ಪಾವತಿಸಿ ಸಕ್ರಮಗೊಳಿಸಿಕೊಂಡಿರುವ ಫಲಾನುಭವಿಗಳಿಗೆ, ಈ ದುಬಾರಿ ಶುಲ್ಕ ಮತ್ತಷ್ಟು ಹೊರೆಹಾಕಲಿದೆ. ಅಂತೆಯೆ ಭೂಬಳಕೆ ಉಲ್ಲಂಘನೆಯ ಅಕ್ರಮಕ್ಕೆ ಪತ್ರಿಕಾ ಜಾಹೀರಾತಿಗಾಗಿ ವೈಯಕ್ತಿಕವಾಗಿ ಪ್ರತಿಯೊಬ್ಬರಿಂದ ರೂ. 15000/, ಗಳನ್ನು ಶುಲ್ಕದ ರೀತಿಯಲ್ಲಿ ಸಂಗ್ರಹಿಸುವ ಕ್ರಮವಂತೂ ಬಿಬಿಎಂಪಿಯ ಎಲ್ಲಾ ಹೊಣೆಯನ್ನು ನಾಗರಿಕರ ಮೇಲೆ ಹಾಕುವ ಪರಿಯ ಭಾಗವಾಗಿದೆ. ಪಾವತಿಸಿ-ಬಳಸಿ ಎಂಬ ಉದಾರೀಕರಣ-ಖಾಸಗೀಕರಣ-ಜಾಗತೀಕರಣದ ಉದ್ದೇಶಗಳ ಜಾರಿಯ ಭಾಗವಾಗಿ ಈ ದುಬಾರಿ ಶುಲ್ಕಗಳು ಹೊರೆಹೊಮ್ಮಿವೆ, ಎಂದು ಸಿ.ಪಿ.ಐ.(ಎಂ), ಜಿಲ್ಲಾ ಸಮಿತಿ ಖಂಡಿಸಿದೆ.

ಈ ಹಿನ್ನಲೆಯಲ್ಲಿ ಬಿಬಿಎಂಪಿಯು ಕೂಡಲೇ ಅಕ್ರಮ-ಸಕ್ರಮದ ತೀರ್ಮಾನಗಳನ್ನು ಪುನರ್ ವಿಮರ್ಶಿಸಬೇಕು ಇಲ್ಲದಿದ್ದಲ್ಲಿ ತೀರ್ವವಾದ ಹೋರಾಟವನ್ನು ಎದುರಿಸಬೇಕಾಗುತ್ತದೆ ಎಂದು ಸಿ.ಪಿ.ಐ.(ಎಂ) ಜಿಲ್ಲಾ ಸಮಿತಿ ಎಚ್ಚರಿಸುತ್ತದೆ.

ಕಾಮೆಂಟ್‌ಗಳಿಲ್ಲ: