1.21.2010

ಬೆಲೆ ಏರಿಕೆ ವಿರುದ್ದ ಎಡ ಪಕ್ಷಗಳ ರಾಷ್ಟ್ರವ್ಯಾಪಿ ಪಿಕೆಟಿಂಗ್




ದಿನಾಂಕ : 21.01.2010

ಇವರಿಗೆ,
ಮಾನ್ಯ ಮುಖ್ಯಮಂತ್ರಿಗಳು ಕರ್ನಾಟಕ ಸರ್ಕಾರ
ವಿಧಾನಸೌಧ ಬೆಂಗಳೂರು 


ಮೂಲಕ, 
        ಮಾನ್ಯ ಜಿಲ್ಲಾಧಿಕಾರಿಗಳು ಬೆಂಗಳೂರು ನಗರ ಜಿಲ್ಲೆ, 
         ಬೆಂಗಳೂರು
            
ಮಾನ್ಯರೇ,

ವಿಷಯ : ಬೆಲೆ ಏರಿಕೆ ತಡೆಗಟ್ಟಬೇಕು, ಎಲ್ಲಾ ಅರ್ಹರಿಗೂ 2 ರೂನಂತೆ 35 ಕೆಜಿ ಅಕ್ಕಿ ನೀಡಬೇಕು ಹಾಗೂ ಆಹಾರದ ಹಕ್ಕು ಮಸೂದೆಯನ್ನು ಜನರ  ಪರವಾಗಿ ತಿದ್ದುಪಡಿ ಮಾಡಬೇಕೆಂದು ಒತ್ತಾಯಿಸಿ ಮನವಿ.

ಸತತವಾಗಿ ಹೆಚ್ಚುತ್ತಲೇ ಇರುವ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ವಿರೋಧಿಸಿ, ಆಹಾರದ ಹಕ್ಕಿಗಾಗಿ ಎಡಪಕ್ಷಗಳ ನೇತೃತ್ವದಲ್ಲಿ ರಾಜ್ಯ ಮಟ್ಟದ ಬೃಹತ್ ಜನಾಂದೋಲನ ರ್ಯಾಲಿಯನ್ನು 2009 ನವೆಂಬರ್ 25ರಂದು ಮತ್ತು ರಾಜ್ಯದ ಎಲ್ಲಾ ತಹಸಿಲ್ದಾರ್ ಕಛೇರಿಗಳೆದುರು 2010 ಜನವರಿ 11,12,13 ರಂದು ಪ್ರತಿಭಟನೆಗಳನ್ನು ನಡೆಸಲಾಗಿದೆ. ಮೂರನೇ ಹಂತದ ಚಳುವಳಿಯಾಗಿ ಜನವರಿ 21 ಇಂದು ಜಿಲ್ಲಾಧಿಕಾರಿ ಕಛೇರಿಗಳನ್ನು ಪಿಕೆಟಿಂಗ್ ನಡೆಸಲಾಗುತ್ತಿದೆ. ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಮನವಿಯಲ್ಲಿ ಪ್ರಸ್ತಾಪಿಸಿರುವ ಬೇಡಿಕೆಗಳನ್ನು ಪರಿಹರಿಸಬೇಕೆಂದು ಒತ್ತಾಯಿಸುತ್ತೇವೆ.


ರಾಜ್ಯ ಸರ್ಕಾರ ಕೈಗೊಳ್ಳಬೇಕಾದ ಬೇಡಿಕೆಗಳು : 
1. ಬಿಜೆಪಿಯು ಕನಿಷ್ಟ ತನ್ನ ಚುನಾವಣಾ ಘೋಷಣೆಯಲ್ಲಿ ಭರವಸೆ ನೀಡಿದಂತೆ ಕೆ.ಜಿ.ಗೆ 2ರೂ.ನಂತೆ ಆಹಾರ ಧಾನ್ಯ  ಮತ್ತು ಆದಾಯ ಮಿತಿಯನ್ನು 30,000ಕ್ಕೆ ಏರಿಸಬೇಕು. ರೂ.3.00 ದರದಲ್ಲಿ ತಲೆಗೆ 4 ಕೆ.ಜಿ. ರೇಷನ್ ಎನ್ನುವ ಯೂನಿಟ್ ಪದ್ಧತಿಯನ್ನು ಕೈಬಿಟ್ಟು, ಎಲ್ಲಾ ಬಿಪಿಎಲ್ ಕಾರ್ಡ್ ದಾರರಿಗೂ ರೂ.2.00 ದರದಲ್ಲಿ 35 ಕೆ.ಜಿ. ರೇಷನ್ ನ್ನು ನೀಡಬೇಕು. 


2. ಕೇವಲ ಸೀಮೆಎಣ್ಣೆಯನ್ನು ಮಾತ್ರ ನೀಡುತ್ತಿರುವ ಎಪಿಎಲ್ ಕಾರ್ಡುದಾರರಿಗೂ ರೂ.2.00ರ ದರದಲ್ಲಿ 35 ಕೆ.ಜಿ. ರೇಷನನ್ನು ನೀಡಬೇಕು.


3. ಸದ್ಯ ``ಟಾರ್ಗೆಟೆಡ್ ರೇಷನ್'' ಪದ್ಧತಿಯನ್ನು ರದ್ದುಪಡಿಸಿ, ಸಾಲಿನಲ್ಲಿ ನಿಂತು ರೇಷನ್ ಅಂಗಡಿಯಲ್ಲಿ ಆಹಾರ ಪದಾರ್ಥಗಳನ್ನು ತೆಗೆದುಕೊಳ್ಳಲು ಸಿದ್ದವಿರುವ ಪ್ರತಿಯೊಂದು ಕುಟುಂಬಕ್ಕೂ, ಏಕ ದರದ, ಏಕ ಪ್ರಮಾಣದ ರೇಷನ್ ನ್ನು ನೀಡುವ `ಸಾರ್ವತ್ರಿಕ ರೇಷನ್ ಪದ್ಧತಿ' ಯನ್ನು ಜಾರಿಗೆ ತರಬೇಕು.


4. ಅಂತ್ಯೋದಯ ಕಾರ್ಡುದಾರರಿಗೆ ರೇಷನನ್ನು 25 ಕೆ.ಜಿ.ಗೆ ಕಡಿತಗೊಳಿಸುವ ಹಾಗೂ ದರವನ್ನು ರೂ.3.00ಕ್ಕೆ ಏರಿಸಬೇಕೆನ್ನುವ ಕೇಂದ್ರ ಸರ್ಕಾರದ ಪ್ರಸ್ತಾಪವನ್ನು ಕೈಬಿಟ್ಟು, ಸದ್ಯದ 35 ಕೆ.ಜಿ. ರೇಷನ್, ರೂ.2.00 ದರದಲ್ಲಿ ನೀಡುವ ವ್ಯವಸ್ಥೆಯನ್ನು ಮುಂದುವರಿಸಬೇಕು.


5. `ನೆಮ್ಮದಿ' ಕೇಂದ್ರಗಳಲ್ಲಿ ವಿತರಣೆ ಮಾಡಿರುವ `ತಾತ್ಕಾಲಿಕ ರೇಷನ್' ಕಾರ್ಡ್ ಗಳನ್ನು ಖಾಯಂ ಮಾಡಬೇಕು. 'ಭಾವಚಿತ್ರವಿಲ್ಲ' `ಶ್ರೀಮಂತರು' ಇತ್ಯಾದಿ ಕಾರಣಗಳನ್ನು ಹೇಳಿ ರೇಷನ್ ತಡೆಹಿಡಿದಿರುವುದನ್ನು ತಕ್ಷಣ ರದ್ದುಮಾಡಿ, ಇವರಿಗೂ ರೂ.2.00 ದರದಲ್ಲಿ 35 ಕೆ.ಜಿ. ರೇಷನನ್ನು ನೀಡಬೇಕು. ಅಂದರೆ, ಬಿಪಿಎಲ್, ಎಪಿಎಲ್, ತಾತ್ಕಾಲಿಕ ರೇಷನ್ ಕಾರ್ಡ್, ಎನ್ನುವ ತಾರತಮ್ಯ, ಯೂನಿಟ್ ಪದ್ಧತಿ ಇತ್ಯಾದಿಗಳನ್ನು ಬಿಟ್ಟು, ಈಗ ಅಂತ್ಯೋದಯ ರೇಷನ್ ಕಾರ್ಡ್ ಗೆ ನೀಡುತ್ತಿರುವ ರೀತಿಯಲ್ಲಿ ಪ್ರತಿ ಕೆ.ಜಿ.ಗೆ ರೂ.2-00 ದರದಲ್ಲಿ, 35 ಕೆ.ಜಿ. ರೇಷನ್, ಜೊತೆಗೆ ಕೇರಳದ ಮಾದರಿಯಲ್ಲಿ 14 ವಸ್ತುಗಳ ನೀಡಿಕೆಯ ಅಂಶವನ್ನು ಒಳಗೊಂಡು ಉದ್ದೇಶಿತ ಕೇಂದ್ರ ಸರ್ಕಾರದ `ಆಹಾರ ಭದ್ರತೆ' ಯ ಕಾನೂನು ಜಾರಿಯಾಗಬೇಕು.


6. ಪಕ್ಕದ ಕೇರಳ ಕಮ್ಯುನಿಸ್ಟ್ ಸರ್ಕಾರ ನೀಡಿರುವ ರೀತಿಯಲ್ಲಿ ಅಕ್ಕಿ, ಗೋಧಿ, ಸೀಮೆ ಎಣ್ಣೆ, ಸಕ್ಕರೆಯ ಜೊತೆಗೆ ಬೇಳೆ ಕಾಳು, ಇತ್ಯಾದಿ ವಸ್ತುಗಳನ್ನು ರಾಜ್ಯದಲ್ಲಿಯೂ ನೀಡಬೇಕು.
  
ತಕ್ಷಣ ರಾಜ್ಯ ಸರ್ಕಾರ ಇಂತಹ ಕ್ರಮಗಳನ್ನು ಕೈಗೊಳ್ಳಬೇಕು ಮತ್ತು ಅಗತ್ಯ ಆಹಾರ ಪದಾರ್ಥಗಳ ಬೆಲೆ ಏರಿಕೆಯನ್ನು ನಿಯಂತ್ರಿಸಲು ಕೆಳಕಂಡ ಬೇಡಿಕೆಗಳಿಗಾಗಿ ಕೂಡಲೇ ಕೇಂದ್ರ ಸರ್ಕಾರವನ್ನು ಒತ್ತಾಯಿಸಬೇಕೆಂದು ಆಗ್ರಹಿಸುತ್ತೇವೆ.


ಬೆಲೆಯೇರಿಕೆಯನ್ನು ತಡೆಯಲು ಬೇಡಿಕೆಗಳು

1. ಆವಶ್ಯಕ ಸರಕುಗಳಲ್ಲಿ ಎಲ್ಲಾ ಮುಂಗಡ ವ್ಯಾಪಾರವನ್ನು ನಿಷೇಧಿಸಬೇಕು.


2.ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ಬಲಪಡಿಸಬೇಕು. ರಾಜ್ಯಗಳಿಗೆ ಎಪಿಎಲ್ ವಿಭಾಗಗಳಿಗೆಂದು ಒದಗಿಸುವ ಪ್ರಮಾಣದಲ್ಲಿ ಮಾಡಿರುವ ಕಡಿತವನ್ನು ಹಿಂತೆಗೆದುಕೊಳ್ಳಬೇಕು.


3. ಕಳ್ಳದಾಸ್ತಾನನ್ನು ಹೊರಗೆಳೆಯಬೇಕು ಮತ್ತು ಕಳ್ಳ ದಾಸ್ತಾನುಗಾರರು ಹಾಗೂ ಕಾಳಸಂತೆಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.


4. ಪೆಟ್ರೋಲ್, ಡೀಸೆಲ್ ಬೆಲೆಗಳ ಏರಿಕೆಯನ್ನು ಹಿಂತೆಗೆದುಕೊಳ್ಳಬೇಕು.




ಧನ್ಯವಾದಗಳೊಂದಿಗೆ,


     (ಪ್ರಕಾಶ್ ಕೆ.)             ಜಿಲ್ಲಾ ಕಾರ್ಯದರ್ಶಿ, ಸಿಪಿಐ(ಎಂ)   9448574389
(ಎಂ.ಡಿ.ಹರಿಗೋವಿಂದ್) ಜಿಲ್ಲಾ ಕಾರ್ಯದರ್ಶಿ, ಸಿಪಿಐ           9845788334 
(ಜಿ.ಆರ್.ಶಿವಶಂಕರ್)     ಅಧ್ಯಕ್ಷರು, ಏಐಎಫ್ ಬಿ                  9341007797


ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ) 
ಭಾರತ ಕಮ್ಯುನಿಸ್ಟ್ ಪಕ್ಷ  
ಅಖಿಲ ಭಾರತ ಫಾರ್ವರ್ಡ್ ಬ್ಲಾಕ್

ಕೇರಾಫ್ #13/1, 1ನೇ ಕ್ರಾಸ್, 5ನೇ ಮೈನ್, ಸಂಪಂಗಿರಾಮನಗರ,
ಬೆಂಗಳೂರು -560027, ದೂ: 080 22483539

ಕಾಮೆಂಟ್‌ಗಳಿಲ್ಲ: