ಜನವಿರೋಧಿಯಾದ ಅಕ್ರಮ-ಸಕ್ರಮ ಸುಗ್ರೀವಾಜ್ಞೆಯನ್ನು ರಾಜ್ಯಪಾಲರು ತಡೆಹಿಡಿದ ಬೆನ್ನಲ್ಲೇ ಅಭಿವೃದ್ಧಿ ಶುಲ್ಕ ಸಂಗ್ರಹಿಸಲು ಬಿಬಿಎಂಪಿ ನಿರ್ಧರಿಸಿರುವುದು ಜನವಿರೋಧಿ ಕ್ರಮ ಮತ್ತು ಯಾವುದೇ ಕಾರಣಕ್ಕೂ ಇಂತಹ ಸಂಗ್ರಹವನ್ನು ಒಪ್ಪುವುದಿಲ್ಲ ಎಂದು ಸಿಪಿಐ(ಎಂ) ಬೆಂಗಳೂರು ಜಿಲ್ಲಾ ಸಮಿತಿ ಎಚ್ಚರಿಸಿದೆ.
ಚುನಾಯಿತ ಪ್ರತಿನಿಧಿಗಳು ಇಲ್ಲದೇ ವ್ಯಾಪಕ ಪರಿಣಾಮವನ್ನು ಬೀರುವ ಕ್ರಮಗಳನ್ನು ಬಿಬಿಎಂಪಿಯ ಅಧಿಕಾರಿಗಳು ಕೈಗೊಳ್ಳುವುದು ಪ್ರಜಾಪ್ರಭುತ್ವ-ವಿರೋಧಿ ಕ್ರಮವಾಗಿದೆ ಎಂದು ಅಕ್ರಮ-ಸಕ್ರಮಕ್ಕೆ ವ್ಯಾಪಕ ಪ್ರತಿರೋಧ ಬಂದದ್ದರ ಪರಿಣಾಮವಾಗಿ ರಾಜ್ಯಪಾಲರು ಸುಗ್ರೀವಾಜ್ಞೆ ತಡೆಹಿಡಿದಿರುವುದನ್ನು ಗಮನಿಸಬೇಕಾಗಿದೆ. ಈಗ ತರಲು ಬಯಸುತ್ತಿರುವ ಅಭಿವೃದ್ಧಿ ಶುಲ್ಕದ ಕ್ರಮವನ್ನೂ ಸಹ ಹಿಂದೆ ಜನರ ತೀವ್ರ ವಿರೋಧದಿಂದಾಗಿ ಕೈಬಿಟ್ಟದ್ದನ್ನು ಇಷ್ಟು ಬೇಗ ಅಧಿಕಾರಿಗಳು ಮರೆತುಬಿಟ್ಟರೆ ಜನರ ತೀವ್ರ ಪ್ರತಿಭಟನೆಯನ್ನು ಎದುರಿಸಬೇಕಾಗುತ್ತದೆ.
2,400 ಚದರ ಅಡಿ ನಿವೇಶನಕ್ಕೆ 1.20 ಲಕ್ಷ ಹಾಗೂ 1,200 ಚದರ ಅಡಿ ನಿವೇಶನಕ್ಕೆ 60 ಸಾವಿರ ರೂಪಾಯಿ ಅಭಿವೃದ್ಧಿ ಶುಲ್ಕ ನಿಗದಿಪಡಿಸಬೇಕೆಂಬ ಸಲಹೆಗಳನ್ನು ಸರ್ಕಾರ ಒಪ್ಪಬಾರದು ಎಂದು ಸಿಪಿಐ(ಎಂ) ಆಗ್ರಹಿಸುತ್ತದೆ.
ಬಿಬಿಎಂಪಿಯ ಚುನಾವಣೆ ನಡೆದು ನೂತನ ಜನಪ್ರತಿನಿಧಿಗಳು ಆಯ್ಕೆಯಾಗುವವರೆಗೂ ಜನರ ಮೇಲೆ ಹೊರೆಯನ್ನು ಹೇರುವ ಯಾವ ಕ್ರಮಗಳಿಗೂ ಮುಂದಾಗಬಾರದು ಎಂದು ಸಿಪಿಐ(ಎಂ) ಒತ್ತಾಯಿಸುತ್ತದೆ.
ಆದ್ದರಿಂದ ಅಭಿವೃದ್ದಿ ಶುಲ್ಕಗಳ ಪ್ರಸ್ತಾಪವನ್ನು ಕೈಬಿಡಬೇಕು ಇಲ್ಲದಿದ್ದರೆ ತೀವ್ರ ಪ್ರತಿಭಟನೆಗಳನ್ನು ಎದುರಿಸಬೇಕಾಗುತ್ತದೆ ಎಂದು ಮಾರ್ಕ್ಸ್ ವಾದಿ ಕಮ್ಯುನಿಸ್ಟ್ ಪಕ್ಷದ ಬೆಂಗಳೂರು ಜಿಲ್ಲಾ ಸಮಿತಿ ಎಚ್ಚರಿಸುತ್ತದೆ.
(ಪ್ರಕಾಶ್ ಕೆ.)
ಜಿಲ್ಲಾ ಕಾರ್ಯದರ್ಶಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ