ಏಪ್ರಿಲ್ 1 ರಿಂದಲೇ ಪೂರ್ವಾನ್ವಯವಾಗುವಂತೆ ನೀರಿನ ದರಗಳನ್ನು ಏರಿಸಲು ಬಿಜೆಪಿ ಸರಕಾರ ಹೊರಟಿದ್ದು ಇದು ಜನರನ್ನು ವಂಚಿಸುವ ಮತ್ತು ಲೂಟಿ ಮಾಡುವ ಕ್ರಮವಾಗಿದೆಯೆಂದು ಮಾರ್ಕ್ಸ್ ವಾದಿ ಕಮ್ಯುನಿಸ್ಟ್ ಪಕ್ಷ ಖಂಡಿಸುತ್ತದೆ. ಶೇ.33 ರಿಂದ ಶೇ.200 ರಷ್ಟು ದರ ಹೆಚ್ಚಳ ಮಾಡುವ ಸರ್ಕಾರ ಅತ್ಯಂತ ಜನವಿರೋಧಿಯಾಗಿದೆ. ಬಿಬಿಎಂಪಿ ಚುನಾವಣೆಗಳು ಮುಗಿಯುವುದನ್ನೇ ಕಾಯುತ್ತಿದ್ದ ಬಿಜೆಪಿ ಸಾಲುಸಾಲಾಗಿ ಈಗ ಬೆಲೆಗಳನ್ನು ಏರಿಸಲು ಮುಂದಾಗಿದೆ. ಹಾಲಿನ ದರ, ವಿದ್ಯುತ್ ದರ, ಬಿಎಂಟಿಸಿ ಬಸ್ ದರ, ಹೀಗೆ ಜನಸಾಮಾನ್ಯರು ಬಳಸುವ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಹೆಚ್ಚಳಕ್ಕೆ ಸರ್ಕಾರ ಮುಂದಾಗಿರುವುದು ಜನರಿಗೆ ಬಗೆಯುತ್ತಿರುವ ವಂಚನೆಯಾಗಿದೆ.
ಮತ್ತೊಂದು ಕಡೆ ಕೇಂದ್ರದಲ್ಲಿರುವ ಯುಪಿಎ ಸರ್ಕಾರ ಬೆಲೆಗಳನ್ನು ನಿಯಂತ್ರಣ ಮಾಡದೆ ಶ್ರೀಮಂತರ ಸೇವೆಯಲ್ಲಿ ತೊಡಗಿಸಿಕೊಂಡಿದೆ. ಇನ್ನು ರಾಜ್ಯದ ಬಿಜೆಪಿ ಸರ್ಕಾರ ಜನರನ್ನು ಲೂಟಿ ಮಾಡುತ್ತಿದೆ. ಬಡವರ-ಮಧ್ಯಮವರ್ಗಗಳ ಪರಿಸ್ಥಿತಿ ಅತ್ತ ದರಿ ಇತ್ತ ಪುಲಿ ಎನ್ನುವಂತಾಗಿದೆ.
ಆದ್ದರಿಂದ ದರ ಹೆಚ್ಚಳದ ಪ್ರಸ್ತಾವಗಳನ್ನು ಕೈಬಿಡಬೇಕು, ಮಠಗಳಿಗೆ-ಶ್ರೀಮಂತರಿಗೆ ಸರ್ಕಾರದ ಬೊಕ್ಕಸವನ್ನು ಖಾಲಿ ಮಾಡುವುದನ್ನು ನಿಲ್ಲಿಸಬೇಕು, ಸಾಮಾನ್ಯ ಜನರಿಗೆ ಬೆಲೆ ಏರಿಕೆಯ ಬಿಸಿಯಿಂದ ರಕ್ಷಣೆಕೊಡಬೇಕೆಂದು ಸಿಪಿಐ(ಎಂ) ಒತ್ತಾಯಿಸುತ್ತದೆ.
ಈ ಹಿನ್ನೆಲೆಯಲ್ಲಿ ಎಡಪಕ್ಷಗಳು ಏಪ್ರಿಲ್ 8 ರಂದು ಜಿಪಿಓ ಕಛೇರಿ ಪಿಕೆಟಿಂಗ್ ಮತ್ತು ಜೈಲ್ಭರೋ ಹೋರಾಟವನ್ನು ಹಮ್ಮಿಕೊಂಡಿವೆ.
(ಪ್ರಕಾಶ್ ಕೆ.)
ಜಿಲ್ಲಾ ಕಾರ್ಯದರ್ಶಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ