ಬೆಲೆ ಏರಿಕೆ ವಿರುದ್ದ, 2 ರೂ.ಗೆ 35 ಕೆ.ಜಿ.ರೇಷನ್, ಎಲ್ಲರಿಗೂ ಉದ್ಯೋಗ
ಭೂ ಹೀನರಿಗೆ ಭೂಮಿ, ವಸತಿ ಹೀನರಿಗೆ ನಿವೇಶನ - ಇವುಗಳಿಗೆ ಒತ್ತಾಯಿಸಿ
ಬಂಗಾಳದ ಜನಪರ ಚಳುವಳಿ - ಜನತೆಯನ್ನು ಬೆಂಬಲಿಸಿ
ಎಪ್ರಿಲ್ 8-2010, ಗುರುವಾರ 10-30ಕ್ಕೆ ಬೆಂಗಳೂರಿನ ಎಂ.ಜಿ.ಪ್ರತಿಮೆಯಿಂದ ಹೊರಟು
ಪ್ರಧಾನ ಅಂಚೆ ಕಛೇರಿ GPO ಪಿಕೆಟಿಂಗ್
ನಾಗರಿಕ ಬಂಧುಗಳೇ, ತಡೆ ಇಲ್ಲದ ಬೆಲೆ ಏರಿಕೆ: ಅಡುಗೆ ಮನೆಯಲ್ಲಿ ಕಣ್ಣೀರು ಸುರಿಸುವ ಮಹಿಳೆಯರ ನೋವು ಬೆಂಗಳೂರು, ದೆಹಲಿಯಲ್ಲಿ ಸರ್ಕಾರ ನಡೆಸುತ್ತಿರುವ ನಾಯಕ ಮಣಿಗಳಿಗೆ ಅರ್ಥವಾಗುತ್ತಿಲ್ಲ. ಈರುಳ್ಳಿ ಹೆಚ್ಚುತ್ತಿರುವುದರಿಂದ ಮಹಿಳೆಯರು ಕಣ್ಣೀರು ಸುರಿಸುತ್ತಿಲ್ಲ ಅಥವಾ ಸೀಮೆ ಎಣ್ಣೆ, ಕಟ್ಟಿಗೆಯಲ್ಲಿ ಆಹಾರ ಬೇಯಿಸುವ ಸಂಧರ್ಭದ ಹೊಗೆಯಿಂದಾನೂ ಅಲ್ಲ. ಬದಲಾಗಿ ದರ ಹೆಚ್ಚಳದಿಂದ, ಆದಾಯ ಕುಸಿತದಿಂದ. ಹಸಿದ ಕಂದಮ್ಮಗಳಿಗೆ ಗಂಜಿ ಕುಡಿಸಲಾಗುತ್ತಿಲ್ಲ ಎಂಬ ಕರುಳ ಬಳ್ಳಿಯ ನೋವು ಮಹಿಳೆಯರನ್ನು ಕಾಡುತ್ತಿದೆ.
ಯಾವುದರ ದರ ಕಡಿಮೆ ಇದೆ ಹೇಳಿ ! ಅಕ್ಕಿ, ಹಿಟ್ಟು, ಬೇಳೆ, ಎಣ್ಣೆ, ಸಕ್ಕರೆ, ಹಣ್ಣು, ತರಕಾರಿ-ಎಲ್ಲಾ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಅಗತ್ಯ ವಸ್ತುಗಳ ಬೆಲೆ ಶೇ.20 ರಷ್ಟು ಏರಿಕೆಯಾಗಿದೆ ಎಂದು ಸರ್ಕಾರವೇ ಒಪ್ಪಿಕೊಂಡಿದೆ. ತೊಗರಿಬೇಳೆ, ಸಕ್ಕರೆಯಂತಹ ಸಾಮಾನುಗಳ ದರ ದುಪ್ಪಟ್ಟಾಗಿದೆ. ಬಡವರ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಯುಪಿಎ ಸರ್ಕಾರದ ನೀತಿಗಳು ಹಣವುಳ್ಳವರಿಗೆ ಮಾತ್ರ ಸಹಾಯವಾಗಿದೆ.
ಬಿಬಿಎಂಪಿ ಚುನಾವಣೆಗಳು ಮುಗಿಯುವುದನ್ನೇ ಕಾಯುತ್ತಿದ್ದ ರಾಜ್ಯ ಬಿಜೆಪಿ ಯಡಿಯೂರಪ್ಪ ಸರಕಾರ ನೀರಿನ ದರ ಹೆಚ್ಚಳ ಮಾಡುವುದಾಗಿ ಹೇಳಿದೆ. ವಿದ್ಯುತ್ ದರಗಳು ಹೆಚ್ಚಾಗಲಿವೆ. ಬಿಎಂಟಿಸಿ ಬಸ್ ದರಗಳು ಹೆಚ್ಚಾಗುತ್ತದೆ. ಹಾಲಿನ ದರಗಳನ್ನು ಹೆಚ್ಚಿಸುವುದಾಗಿ ಹೇಳಿದೆ. ಗಾಯದ ಮೇಲೆ ಬರೆ ಎಳೆದಂತೆ ಸಾಮಾನ್ಯ ಜನ ತತ್ತರಿಸಿ ಹೋಗಲಿದ್ದಾರೆ.
ಕುಸಿಯುತ್ತಿರುವ ರೇಷನ್ ವ್ಯವಸ್ಥೆ : ಯುನಿಟ್ ಪದ್ಧತಿಯನ್ನು ಜ್ಯಾರಿಗೆ ತಂದ ರಾಜ್ಯದ ಬಿಜೆಪಿ ಮತ್ತು ಕೇಂದ್ರದ ಕಾಂಗ್ರೆಸ್ ಸರ್ಕಾರಗಳು ಬಿಪಿಎಲ್ ಕಾರ್ಡ್ನಲ್ಲಿ ಪ್ರತಿಯೊಬ್ಬರಿಗೆ ತಿಂಗಳಿಗೆ ಕೇವಲ 4 ಕೆ.ಜಿ.ಆಹಾರ ಧಾನ್ಯ ನೀಡುತ್ತಿದೆ. ಅದೂ ಕುಟುಂಬದಲ್ಲಿ 5 ಜನಕ್ಕಿಂತ ಜಾಸ್ತಿ ಇದ್ದರೆ 20 ಕೆ.ಜಿ.ಗೆ ಲಿಮಿಟ್. ಅಂದರೆ ಜೈಲಿನಲ್ಲಿರುವವರಿಗೆ ನೀಡುವ ಆಹಾರಕ್ಕಿಂತಲೂ ರೇಷನ್ನಲ್ಲಿ ನೀಡುವ ಧಾನ್ಯ ಕಡಿಮೆ! ಇನ್ನು ಬಡವರು ಅಂದರೆ ಯಾರು ಗೊತ್ತೇ ? ದಿನಕ್ಕೆ 30 ರೂ.ಗಿಂತ ಕಡಿಮೆ ಆದಾಯವಿರುವವರು ಮಾತ್ರ! ಅವರಿಗೆ ಮಾತ್ರ ಬಿಪಿಎಲ್ ಕಾರ್ಡ್. ಪಕ್ಕದ ಕೇರಳ ರಾಜ್ಯದಲ್ಲಿ ಆಹಾರ ಧಾನ್ಯಗಳ ಬೆಲೆ ಕಡಿಮೆ ಯಾಕೆ ಗೊತ್ತೇ? ಎಪಿಎಲ್ ಕಾರ್ಡುಗಳಿಗೂ ಸೇರಿದಂತೆ ಎಲ್ಲರಿಗೂ ಕಡಿಮೆ ದರದಲ್ಲಿ ನಮ್ಮ ರಾಜ್ಯಕ್ಕಿಂತ ಹೆಚ್ಚು ರೇಷನ್ ನೀಡುತ್ತಾರೆ. ಆದ್ದರಿಂದ ಓಪನ್ ಮಾರ್ಕೆಟ್ಟಿನಲ್ಲಿ ದರ ಕಡಿಮೆ.
ಕೆಲವೇ ಕೆಲವು ಶ್ರೀಮಂತರಿಗೆ 4 ಲಕ್ಷ ಕೋಟಿ ರೂ.(4,00,000 ಕೋಟಿ) ತೆರಿಗೆ ರಿಯಾಯಿತಿ ನೀಡಬಹುದಾದರೆ ಕೋಟಿಗಟ್ಟಲೆ ಬಡಜನರಿಗೆ ರಿಯಾಯಿತಿ ದರದಲ್ಲಿ ಆಹಾರ ಧಾನ್ಯ ನೀಡಲು ಕೇಂದ್ರ ಸರ್ಕಾರಕ್ಕೆ ಯಾಕೆ ಸಾಧ್ಯವಾಗುವುದಿಲ್ಲ? ರಾಜ್ಯದಲ್ಲಿ ಮಠಗಳಿಗೆ-ಖಾಸಗಿ ಸಂಸ್ಥೆಗಳಿಗೆ ನೂರಾರು ಕೋಟಿ ಧಾರೆಯೆರೆಯಬಹುದಾದರೆ ಬೆಲೆ ಏರಿಕೆ ಮಾಡದೆ ಆಡಳಿತ ಮಾಡಲು ಯಾಕಾಗುವುದಿಲ್ಲ?
ಎಲ್ಲರಿಗೂ ಕೆಲಸ: ದೇಶದಲ್ಲಿ ನಿರುದ್ಯೋಗದ ಬವಣೆ ದಿನೇ ದಿನೇ ಹೆಚ್ಚುತ್ತಿದೆ. ಆರ್ಥಿಕ ಬಿಕ್ಕಟ್ಟಿನಿಂದಾಗಿ ಇರುವ ಉದ್ಯೋಗಗಳೂ ನಷ್ಟವಾಗುತ್ತಿದೆ. 2008-09ರಲ್ಲಿ 11 ಲಕ್ಷ ಮತ್ತು 09-10ರಲ್ಲಿ 13 ಲಕ್ಷ ಕಾರ್ಮಿಕರು ಕೆಲಸ ಕಳೆದುಕೊಂಡಿದ್ದಾರೆ.
ಎಡ ಪಕ್ಷಗಳ ಒತ್ತಾಯದಿಂದಾಗಿ ವರ್ಷಕ್ಕೆ 100 ದಿನ ಕೆಲಸ ನೀಡುವ ಉದ್ಯೋಗ ಖಾತರಿ ಯೋಜನೆ ಜಾರಿಗೆ ಬಂದರೂ ಅದು ಸಮರ್ಪಕವಾಗಿ ಜಾರಿಯಾಗುತ್ತಿಲ್ಲ. ಯಂತ್ರಗಳ ಬಳಕೆ, ಹೇರಳ ಭ್ರಷ್ಟಾಚಾರ ಮತ್ತು ಕೆಲಸ ನೀಡುವಿಕೆಯಲ್ಲಿ ಅಡೆ ತಡೆ-ಇದು ಗ್ರಾಮೀಣ ಪ್ರದೇಶದಲ್ಲಿ ಜನರು ಎದುರಿಸುತ್ತಿರುವ ದೈನಂದಿನ ಸಮಸ್ಯೆಗಳು. ನಗರ ಪ್ರದೇಶದಲ್ಲಿರುವ ಬಡ ಜನತೆ ಈ ಯೋಜನೆಯಿಂದ ವಂಚಿತರಾಗಿದ್ದಾರೆ. ಆದ್ದರಿಂದ ಗ್ರಾಮೀಣ ಮತ್ತು ನಗರ ಪ್ರದೇಶದ ಎಲ್ಲಾ ಬಡ ಜನರಿಗೂ ಈ ಯೋಜನೆ ಜಾರಿಯಾಗಬೇಕೆಂದೂ, ಕೂಲಿ ರೂ. 150ಕ್ಕೆ ಏರಿಸಬೇಕೆಂದೂ ಒತ್ತಾಯಿಸಬೇಕಾಗಿದೆ.
ಖಾಸಗಿ ಉದ್ದಿಮೆಗಳಲ್ಲಿ ಎಸ್. ಸಿ/ಎಸ್. ಟಿ ನೌಕರರಿಗೆ ಯಾವುದೇ ಮೀಸಲಾತಿ ಇಲ್ಲ. ಖಾಸಗೀಕರಣ, ಗುತ್ತಿಗೆ, ಹೊರಗುತ್ತಿಗೆ ಪದ್ದತಿಗಳಿಂದ ಈ ವಿಭಾಗ ಉದ್ಯೋಗ ವಂಚಿತರಾಗಿದ್ದಾರೆ. ಸಾಚಾರ್ ಸಮಿತಿ ವರದಿಯ ಪ್ರಕಾರ ಸರಕಾರಿ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರಿಗೆ ದೊರಕುತ್ತಿರುವ ಉದ್ಯೋಗ ಅವಕಾಶಗಳು ತೀರಾ ಕಡಿಮೆ. ವಿಕಲಾಂಗ ಚೇತನರಿಗೆ(ಅಂಗವಿಕಲರು) ಶೇ 3 ರಷ್ಟು ಉದ್ಯೋಗ ನೀಡಬೇಕೆಂದು ಕಾನೂನುಗಳಿದ್ದರೂ ಆ ಹುದ್ದೆಗಳು ಭರ್ತಿಯಾಗುತ್ತಿಲ್ಲ.
ಭೂಮಿ ಮತ್ತು ನಿವೇಶನ: ಇಂದು ನಗರ, ಪಟ್ಟಣಗಳಲ್ಲಿ ನಿವೇಶನಗಳ ಬೆಲೆ, ಬಾಡಿಗೆ ತುಂಬಾ ದುಬಾರಿಯಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿಯೂ ಮನೆ, ನಿವೇಶನಗಳನ್ನು ಒದಗಿಸುವ ತ್ವರಿತ ಯೋಜನೆ ಜಾರಿಯಾಗುತ್ತಿಲ್ಲ.
ಕರ್ನಾಟಕ ಸರಕಾರ ವಶಪಡಿಸಿಕೊಂಡ ಭೂಮಿಗಳನ್ನು ಮನೆ ಇಲ್ಲದವರಿಗೆ ನೀಡುವುದರ ಬದಲಾಗಿ ರಿಯಲ್ ಎಸ್ಟೇಟಿನ ಮಾಫಿಯಾಗಳಿಗೆ ಮಣೆ ಹಾಕುತ್ತಿದೆ. ಕೇಂದ್ರದಲ್ಲಿರುವ ಕಾಂಗ್ರೆಸ್ ಸರಕಾರವಾಗಲೀ, ರಾಜ್ಯದಲ್ಲಿರುವ ಬಿಜೆಪಿ ಸರಕಾರವಾಗಲೀ ಬಡವರಿಗೆ ಭೂಮಿ ನೀಡುವ ಬದಲಾಗಿ 1894ರ ಭೂಮಿ ಪರಭಾರೆ ಕಾಯಿದೆಯನ್ನು ಉಪಯೋಗಿಸಿ ಅಭಿವೃದ್ದಿಯ ಹೆಸರಿನಲ್ಲಿ ಸಣ್ಣ ರೈತರ ಜಮೀನನ್ನು ವಶ ಪಡಿಸಿಕೊಳ್ಳುತ್ತಿದೆ.
ಬಂಗಾಳ ಜನತೆಯ ಹೋರಾಟಕ್ಕೆ ಬೆಂಬಲ: ಪ್ರಗತಿ ಪರ ಚಳುವಳಿಯ ಪ್ರತೀಕವಾಗಿರುವ ಪಶ್ಚಿಮ ಬಂಗಾಳ ಸರಕಾರ 33 ವರ್ಷಗಳಿಂದ ಸತತ ಅಧಿಕಾರದಲ್ಲಿದ್ದು ತನ್ನ ಇತಿಮಿತಿಯಲ್ಲಿ ಸಾಮಾನ್ಯ ಜನರಿಗೆ ಸಹಾಯವಾಗುವ ಆಡಳಿತ ನಡೆಸುತ್ತಿದೆ. ಇಂತಹ ಸರಕಾರವನ್ನು ಬುಡಮೇಲು ಮಾಡುವ ದೃಷ್ಟಿಯಿಂದ ಸಿಪಿಐ(ಎಂ) ಮತ್ತು ಎಡಪಕ್ಷಗಳಿಗೆ ಸೇರಿದ ಕಾರ್ಯಕರ್ತರನ್ನು ಕೊಲ್ಲಲಾಗುತ್ತಿದೆ. ಕಳೆದ ಲೋಕಸಭಾ ಚುನಾವಣೆಯಿಂದ ಈಚೆಗೆ 168 ಎಡಪಕ್ಷಗಳ ಮುಖಂಡರು, ಕಾರ್ಯಕರ್ತರು ಹಾಗೂ ಹಿತೈಷಿಗಳು ತೃಣಮೂಲ ಕಾಂಗ್ರೆಸ್ ಗೂಂಡಾಗಳಿಂದ ಮತ್ತು ಅದರೊಂದಿಗೆ ಗುಪ್ತ ಮೈತ್ರಿಯನ್ನು ಹೊಂದಿರುವ ಮಾವೋವಾದಿಗಳಿಂದ ಹತರಾಗಿದ್ದಾರೆ. ಭಾರತವನ್ನು ಲೂಟಿ ಹೊಡೆಯಬೇಕೆಂದಿರುವ ಬೃಹತ್ ಬಂಡವಾಳದಾರರು - ವಿದೇಶೀ ಬಂಡವಾಳದಾರರು ಇದರಿಂದ ಸಂತೋಷ ಪಡುತ್ತಿದ್ದಾರೆ. ಇದು ಬಂಗಾಳದ ಎಡ ಚಳುವಳಿಗೆ ಧಕ್ಕೆಯಾಗಿರುವುದು ಮಾತ್ರವಲ್ಲದೆ, ಇಡೀ ದೇಶದ ಪ್ರಜಾಸತ್ತಾತ್ಮಕ ಚಳುವಳಿಗೆ ಮತ್ತು ಭಾರತದ ಸಾರ್ವಭೌಮತೆಗೆ ಅಪಾಯ ತಂದೊಡ್ಡುತ್ತದೆ.
ಈ ನಿಟ್ಟಿನಲ್ಲಿ ಮಾರ್ಚ್ 12 ರಂದು 4 ಎಡ ಪಕ್ಷಗಳ ನೇತೃತ್ವದಲ್ಲಿ ದೆಹಲಿಯಲ್ಲಿ ನಡೆದ ರ್ಯಾಲಿಯಲ್ಲಿ ಮೇಲಿನ ಬೇಡಿಕೆಗಳ ಬಗ್ಗೆ ತೀವ್ರವಾದ ಹೋರಾಟವನ್ನು ನಡೆಸಬೇಕೆಂದು ಕರೆ ನೀಡಿದೆ. 1 ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸಿದ್ದ ರ್ಯಾಲಿಯಲ್ಲಿ ಎಪ್ರಿಲ್ 8 ರಂದು ದೇಶದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಕೇಂದ್ರ ಸರಕಾರಿ ಕಛೇರಿಗಳ ಮುಂದೆ ಸಮರ ಶೀಲ ಪಿಕೆಟಿಂಗ್ ನಡೆಸಿ ಜೈಲ್ ಭರೋ ಕಾರ್ಯಕ್ರಮ ನಡೆಸಲು ಕರೆ ನೀಡಿದೆ.
ಕರ್ನಾಟಕದಲ್ಲಿ ಎಡ ಪಕ್ಷಗಳ ಹೋರಾಟ : ಕನರ್ಾಟಕ ರಾಜ್ಯದಲ್ಲಿ ಈಗಾಗಲೇ ಸಿಪಿಐ(ಎಂ), ಸಿಪಿಐ ಮತ್ತು ಫಾರ್ವರ್ಡ್ ಬ್ಲಾಕ್ ಪಕ್ಷಗಳ ನೇತೃತ್ವದಲ್ಲಿ ಕೆ.ಜಿ.ಗೆ 2 ರೂ.ನಂತೆ 35 ಕೆ.ಜಿ. ರೇಷನ್, ಎಲ್ಲರಿಗೂ ರೇಷನ್ ಕಾರ್ಡ್-ಎಲ್ಲಾ ಕಾರ್ಡುದಾರರಿಗೂ ರೇಷನ್ ಹಾಗೂ ಬೆಲೆ ಏರಿಕೆಯ ವಿರುದ್ದ ಒಂದು ಹಂತದ ಹೋರಾಟವನ್ನು ನಡೆಸಲಾಗಿದೆ. 2009ರ ಅಕ್ಟೋಬರ್ 26ರಂದು ಬೆಂಗಳೂರಿನ ಪುರಭವನದಲ್ಲಿ ರಾಜ್ಯ ಮಟ್ಟದ ಸಮಾವೇಶವನ್ನು ನಡೆಸಿ ರಾಜ್ಯದಲ್ಲೆಲ್ಲಾ ಪ್ರಚಾರ ನಡೆಸಿ ನವೆಂಬರ್ 25ರಂದು ಬೃಹತ್ ರ್ಯಾಲಿಯನ್ನು ನಡೆಸಲಾಗಿದೆ. ಈ ಹೋರಾಟದ ಮುಂದುವರಿದ ಭಾಗವಾಗಿ ಎಪ್ರಿಲ್ 8ರ ಪಿಕೆಟಿಂಗ್ ಮತ್ತು ಜೈಲ್ ಭರೋ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿದೆ.
ಕಾಂಗ್ರೆಸ್ ಮತ್ತು ಬಿಜೆಪಿ ಸರಕಾರಗಳ ನೀತಿಗಳನ್ನು ವಿರೋಧಿಸುವವರು, ಜನಪರ ಚಿಂತಕರು, ಚಳುವಳಿಕಾರರು ಎಡಪಕ್ಷಗಳ ಈ ಹೋರಾಟಕ್ಕೆ ಬೆಂಬಲ ನೀಡಬೇಕೆಂದು ಮನವಿ ಮಾಡುತ್ತೇವೆ.
ಪ್ರಕಾಶ್ ಕೆ. - ಬೆಂಗಳೂರು ಜಿಲ್ಲಾ ಕಾರ್ಯದರ್ಶಿ, ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ)
ಎಂ.ಡಿ.ಹರಿಗೋವಿಂದ್ - ಬೆಂಗಳೂರು ಜಿಲ್ಲಾ ಕಾರ್ಯದರ್ಶಿ, ಭಾರತ ಕಮ್ಯುನಿಸ್ಟ್ ಪಕ್ಷ
ಜಿ.ಆರ್.ಶಿವಶಂಕರ್ - ರಾಜ್ಯ ಅದ್ಯಕ್ಷರು , ಫಾರ್ವರ್ಡ್ ಬ್ಲಾಕ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ