8.31.2010

ಜನಪರವಲ್ಲದ ಸುಲಿಗೆಕೋರ ಬಿಬಿಎಂಪಿ ಬಜೆಟ್ - ಸಿಪಿಐ(ಎಂ)

31.08.2010
`ಪ್ರಕಟಣೆಗಾಗಿ'

ಏಳು ತಿಂಗಳ ಅವಧಿಗೆ ಮಂಡಿಸಲಾಗಿರುವ ಪಾಲಿಕೆ ಬಜೆಟ್ ಬೆಂಗಳೂರಿನ ಸಾಮಾನ್ಯ ಜನರ ಪಾಲಿಗೆ ನಿರಾಶಾದಾಯಕ ಬಜೆಟ್ ಆಗಿದೆಯೆಂದು ಸಿಪಿಐ(ಎಂ) ಅಭಿಪ್ರಾಯ ಪಟ್ಟಿದೆ.

1. ಮೇಲ್ನೋಟಕ್ಕೆ ಹೊಸ ತೆರಿಗೆ ಇಲ್ಲದ ಬಜೆಟ್ನಂತೆ ಕಂಡರೂ ಧೀರ್ಘಾವಧಿಯಲ್ಲಿ ಜನರ ಮೇಲೆ ಅತೀವವಾದ ಹೊರೆಯನ್ನು ಹೊರಿಸುವ, ವಿಪರೀತ ತೆರಿಗೆಗಳನ್ನು ಹೇರಬೇಕಾಗುವ ಪರಿಸ್ಥಿತಿಯನ್ನು ಈ ಬಜೆಟ್ ನಿರ್ಮಾಣ ಮಾಡಲಿದೆ. ಏಕೆಂದರೆ ಪಾಲಿಕೆಗೆ ಆದಾಯದ ಮೂಲಗಳು ಸ್ಪಷ್ಟವಾಗಿರದೆ ಸಾಲಗಳು ಮತ್ತು 'ಇಲ್ಲದ ಆದಾಯ' ಮೂಲವನ್ನು ಬಜೆಟ್ ಆಧರಿಸಿದೆ.

2. ರೂ.8,488 ಕೋಟಿ ಬಜೆಟ್ ಮೂಲತಃ ಉತ್ಪ್ರೇಕ್ಷಿತವಾದದ್ದಾಗಿದೆ. ಈ ಸದ್ಯ ಬ್ಯಾಂಕ್ಗಳಿಗೆ ರೂ.2600 ಕೋಟಿ ಬಾಕಿ, ಕಂಟ್ರಾಕ್ಟ್ ದಾರರ ಬಿಲ್ ಬಾಕಿ ರೂ.1,300 ಕೋಟಿ ಇದೆ. ಇಂತಹ ಸಂದರ್ಭದಲ್ಲಿ ರೂ.1,890 ಕೋಟಿ ಸಾಲವನ್ನು ಪ್ರಸ್ತಾಪಿಸಲಾಗಿದೆ. ಜೊತೆಗೆ ಈ ಸಾಲವನ್ನು ಸಂಗ್ರಹಿಸಲು ಸಾಧ್ಯವೇ ಇಲ್ಲದ ಅಕ್ರಮ-ಸಕ್ರಮ ಮೂಲದಿಂದ ರೂ.750 ಕೋಟಿ ನಿರೀಕ್ಷಿಸಲಾಗಿದೆ. ಹೊಸ ಸಾಲ ಮತ್ತು ಅಕ್ರಮ-ಸಕ್ರಮದ ಬಾಬ್ತು ಒಟ್ಟಾರೆ ಬಜೆಟ್ ಶೇ. 31.1 ರಷ್ಟಾಗುತ್ತದೆ. ಜೊತೆಗೆ ಬಾಕಿಗಳ ಪ್ರಮಾಣವನ್ನು ಸೇರಿಸಿದರೆ ಈ ಬಜೆಟ್ ಅಪಾರ ಪ್ರಮಾಣದ ಕೊರತೆಯನ್ನು ಅನುಭವಿಸುತ್ತದೆ. ಹೀಗಾಗಿ ಇದು ಉತ್ಪ್ರೇಕ್ಷಿತವಾದ ನಿರಾಶಾದಾಯಕ ಬಜೆಟ್ ಆಗಿದೆ.

3. ಬಜೆಟ್ ನ ಸಿಂಹಪಾಲನ್ನು ಮೂಲಸೌಕರ್ಯಗಳ ಹೆಸರಿನಲ್ಲಿ ಖರ್ಚು ಮಾಡಲು ಬಿಜೆಪಿ ಮುಂದಾಗಿದೆ. ಮೂಲಸೌಕರ್ಯಗಳು ಅಭಿವೃದ್ಧಿಯಾಗಬೇಕೆಂಬುದು ಸರಿಯಾದರೂ, ಶೇ.62ರಷ್ಟು ಬಜೆಟನ್ನು ಇದಕ್ಕಾಗಿ ವಿನಿಯೋಗಿಸುವ ತೀರ್ಮಾನ ಮಾಡಿರುವುದು ಸಾಕಷ್ಟು ಅನುಮಾನಗಳಿಗೆ ಅವಕಾಶ ಕೊಟ್ಟಿದೆ. ಗುತ್ತಿಗೆದಾರರಿಗೆ ಅನುಕೂಲ ಮಾಡಿ ದೊಡ್ಡ ಪ್ರಮಾಣದ ಕಮೀಷನ್ ವ್ಯವಹಾರ ಮಾಡುವುದಕ್ಕೆ ಅವಕಾಶವಿದೆ.

4. ಕುಡಿಯುವ ನೀರು, ಒಳಚರಂಡಿ, ರಾಜಕಾಲುವೆ ಒತ್ತುವರಿ ತೆರೆವು, ಘನತ್ಯಾಜ್ಯ ನಿರ್ವಹಣೆ ಮುಂತಾದ ಕೆಲಸಗಳಿಗೆ ಆದ್ಯತೆ ಬಜೆಟ್ ನಲ್ಲಿ ಸಿಕ್ಕಿಲ್ಲ.

5. ಪಾಲಿಕೆ ಸಿಬ್ಬಂದಿಯ ಕೊರತೆಯಿದ್ದು, ಹೆಚ್ಚಳದ ಬಗ್ಗೆ ಬಜೆಟ್ ಪ್ರಸ್ತಾಪಿಸಿಲ್ಲ. ಸಾವಿರಾರು ಪೌರಕಾರ್ಮಿಕರ ಕೆಲಸದ ಭದ್ರತೆಗೆ ಸಂಬಂಧಿಸಿ, ಅವರ ಸಂಬಳ, ಸೇವಾ ಸೌಲಭ್ಯಗಳಿಗೆ ಸಂಬಂಧಿಸಿ ಬಜೆಟ್ ಮೌನ ವಹಿಸಿರುವುದು ಆಡಳಿತವನ್ನು ಉತ್ತಮಪಡಿಸುವ ಉದ್ದೇಶದ ಕೊರತೆಯನ್ನು ತೋರಿಸುತ್ತದೆ.

6. ತೆರಿಗೆಯೇತರ ಆದಾಯ ಸಂಗ್ರಹದ ಒಂದಂಶವಾಗಿ ಬಿಬಿಎಂಪಿ ಆಸ್ತಿಗಳನ್ನು ಪ್ರಸ್ತಾಪಿಸಲಾಗಿದೆ. ಬಿಬಿಎಂಪಿಯ ಎಲ್ಲಾ ಆಸ್ತಿಗಳನ್ನು ಸರಿಯಾದ ಮೌಲ್ಯಮಾಪನ ಮಾಡಿ ತೆರಿಗೆ ಸಂಗ್ರಹ ಮಾಡುವುದಾಗಿ ಮೇಯರ್ ಮತ್ತು ಆಯುಕ್ತರು ಹಿಂದೆ ಮಾತನಾಡಿದ್ದರು. ಆದರೆ ಬಜೆಟ್ನಲ್ಲಿ ಅದು ಪ್ರತಿಫಲನಗೊಂಡಿಲ್ಲ. ಪಾಲಿಕೆ ಆಸ್ತಿಗಳನ್ನು ಸಮಗ್ರವಾಗಿ ಸಮೀಕ್ಷೆ ಮಾಡಿ ಆದಾಯಗಳನ್ನು ಹೆಚ್ಚಿಸಿಕೊಳ್ಳುವ ಸಾಧ್ಯತೆಗಳಿವೆ. ಆಸ್ತಿ ಕಬಳಿಸುವ ಲಾಭಿಗಳು ಕಡಿಮೆ ಬಾಡಿಗೆ/ಲೀಸ್ಗೆ ಅನಿಯಮಿತವಾಗಿ ಆಸ್ತಿಗಳನ್ನು ಉಪಯೋಗಿಸುವುದಕ್ಕೆ ಕಡಿವಾಣ ಹಾಕುವ ಕೆಲಸವನ್ನು ಬಿಜೆಪಿ ಕೈಬಿಟ್ಟಿರುವುದು ಖಂಡನೀಯವಾಗಿದೆ.

'ಅನುಪಯುಕ್ತ'(?) ಪಾಲಿಕೆ ಆಸ್ತಿಗಳನ್ನು ಹರಾಜು ಹಾಕಿ ರೂ.100 ಕೋಟಿ ಸಂಗ್ರಹಿಸಲು ತೀರ್ಮಾನಿಸಲಾಗಿದೆ. ಬಿಜೆಪಿಯ ರಿಯಲ್ ಎಸ್ಟೇಟ್ ಕುಳಗಳನ್ನು ತೃಪ್ತಿಪಡಿಸಲು ಮತ್ತು ಪಾಲಿಕೆ ಸ್ವತ್ತುಗಳನ್ನು ಲೂಟಿ ಮಾಡಲು ಈ ಕ್ರಮಕ್ಕೆ ಮುಂದಾಗಿದೆ. ಪಾಲಿಕೆಯ ಆಸ್ತಿಗಳನ್ನು ಸಾರ್ವಜನಿಕ ಉದ್ದೇಶಗಳಿಗೆ ಜತನವಾಗಿ ಕಾಪಾಡಬೇಕಾದ್ದು ಮತ್ತು ಮುಂದಿನ ಜನಾಂಗಕ್ಕೆ ಸಾರ್ವಜನಿಕ ಆಸ್ತಿಗಳನ್ನು ರಕ್ಷಿಸಬೇಕಾದ್ದು ಬಿಜೆಪಿ ಆಡಳಿತಗಾರರ ಕರ್ತವ್ಯವಾಗಿದೆ.

7. ಖಾಸಗೀಕರಣಕ್ಕೆ ಒತ್ತು :
(ಅ) ಪಾಲಿಕೆಯ ಮಾರುಕಟ್ಟೆಗಳನ್ನು ಖಾಸಗಿಯವರಿಗೆ ವಹಿಸುವ ಪ್ರಸ್ತಾಪವು ಬಿಜೆಪಿ ವ್ಯಾಪಾರಸ್ಥರ ಪಾರ್ಟಿ ಎನ್ನುವುದಕ್ಕೆ ಪೂರಕವಾಗಿ ಇದೆ. ಮಾರುಕಟ್ಟೆಗಳನ್ನು ಸಮರ್ಪಕ ನಿರ್ವಹಿಸಲು ಕ್ರಮಗಳನ್ನು ಸೂಚಿಸುವ ಬದಲಿಗೆ ಮುಂದೆ ಖಾಸಗಿಯವರಿಗೆ ಪರಭಾರೆ ಮಾಡುವ ಹುನ್ನಾರ ಇದರಲ್ಲಿದೆ. ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಕೆಲಸವಾಗಿದೆ.

(ಆ) ಪಾರ್ಕಿಂಗ್ ಕಾಂಪ್ಲೆಕ್ಸ್ ಗಳನ್ನು ಖಾಸಗಿ ಸಹಭಾಗಿತ್ವದಲ್ಲಿ ಪ್ರಾರಂಭಿಸಲು ಬಜೆಟ್ ಪ್ರಸ್ತಾಪಿಸಿದೆ. ಇದರಿಂದ ಪಾರ್ಕಿಂಗ್ ಶುಲ್ಕದ ಹೆಸರಲ್ಲಿ ಜನಸಾಮಾನ್ಯರನ್ನು ದೋಚುವುದಕ್ಕೆ ಅನುಕೂಲ ಮಾಡಿಕೊಡಲಾಗಿದೆ. ಬಿಜೆಪಿಯವರು ಹಿಂದೆ ಪಾರ್ಕಿಂಗ್ ಶುಲ್ಕ ಹೆಚ್ಚಳ ವಿರೋಧಿಸಿ ಪ್ರತಿಭಟನೆ ಮಾಡಿದ್ದನ್ನು ಈಗ ಜಾಣತನದಿಂದ ಮರೆತಂತೆ ಈ ಪ್ರಸ್ತಾಪ ಮಾಡಿದ್ದಾರೆ.

(ಇ) ಘನತ್ಯಾಜ್ಯ ನಿರ್ವಹಣೆಯಂತಹ ಸೇವೆಗಳನ್ನು ಖಾಸಗಿಯವರಿಗೆ ವಹಿಸಿ ಜವಾಬ್ದಾರಿಯಿಂದ ಕೈತೊಳೆದುಕೊಳ್ಳುವ ಹುನ್ನಾರ ಬಜೆಟ್ ನಲ್ಲಿ ಪ್ರಸ್ತಾಪಿಸಲಾಗಿದೆ.

8. ಮೇಯರ್ ಮತ್ತು ಉಪಮೇಯರ್ ಗಳಿಗೆ ಕ್ರಮವಾಗಿ ರೂ. 150 ಮತ್ತು ರೂ. 25 ಕೋಟಿಗಳನ್ನು ನಿಧಿಯಾಗಿ ತೀರ್ಮಾನಿಸಲಾಗಿದೆ. ಇದು ಅನಗತ್ಯ ಲಾಬಿ ಮತ್ತು ದುರುಪಯೋಗಕ್ಕೆ ಅವಕಾಶ ಕೊಡುತ್ತದೆ. ಇದು ವ್ಯಕ್ತಿಗತ ಲಾಬಿಗೆ ಪ್ರೇರೇಪಣೆ ನೀಡುವುದರಿಂದ ಸಾಮೂಹಿಕ ವಿವೇಚನೆಯನ್ನು ನಾಶ ಮಾಡುತ್ತದೆ. ಕೌನ್ಸಿಲ್ ನ ಸಾಮೂಹಿಕ ವಿವೇಚನೆಯನ್ನು ಇದು ಕುಂಠಿತಗೊಳಿಸುತ್ತದೆ. ಆದ್ದರಿಂದ ಇಂತಹ ನಿಧಿಯು-ಆಕಸ್ಮಿಕ/ತುತರ್ು ನಿಧಿಯ ರೂಪದಲ್ಲಿ ಇರಬೇಕೇ ಹೊರತು ವೈಯುಕ್ತಿಕ ವಿವೇಚನಾ ನಿಧಿ ರೂಪದಲ್ಲಿ ಅಲ್ಲ.

9. ನಗರದ ಸ್ಲಂ ನಿವಾಸಿಗಳಿಗೆ ಹಕ್ಕುಪತ್ರ ನೀಡುವುದಾಗಿ ಬಜೆಟ್ ಹೇಳಿದೆ. ಹಕ್ಕು ಪತ್ರ ನೀಡುವ ವಿಚಾರ ಸ್ವಾಗತಾರ್ಹವಾದರೂ, ಅದಕ್ಕೂ ಮೊದಲು ನಗರದಲ್ಲಿರುವ ಎಲ್ಲಾ ಸ್ಲಂಗಳನ್ನು ಸರಿಯಾಗಿ ನೋಟಿಫೈ ಮಾಡುವ ಅಗತ್ಯವಿದೆ. ಬಹುತೇಕ ಸ್ಲಂಗಳು ನೋಟಿಫೈ ಆಗದಿರುವುದರಿಂದ ಹಕ್ಕುಪತ್ರ ಯಾರಿಗೆ ಸಿಗುತ್ತದೆ ಎಂಬ ಅನುಮಾನವಿದೆ. ಬಜೆಟ್ನಲ್ಲಿ ಈ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲದಿರುವುದರಿಂದ ಹಕ್ಕುಪತ್ರಗಳನ್ನು ನೀಡುವ ವಿಚಾರ ತೋರಿಕೆಯಾಗಿ ಕಾಣುತ್ತದೆ.

10. ನಗರದ ಬಹುಸಂಖ್ಯಾತ ಬಡವರಿಗೆ, ಅಸಂಘಟಿತ ಕಾರ್ಮಿಕರಿಗೆ ನಿವೇಶನ-ವಸತಿ ಗಂಭೀರ ಸಮಸ್ಯೆಯಾಗಿದ್ದು, ಬಿಜೆಪಿ ಚುನಾವಣೆ ಪ್ರಣಾಳಿಕೆಯಲ್ಲಿ ಈ ಬಗ್ಗೆ ಸಾಕಷ್ಟು ಭರವಸೆಗಳನ್ನು ನೀಡಿತ್ತು. ಆದರೆ ಈ ಬಗ್ಗೆ ಬಜೆಟ್ ನಲ್ಲಿ ಯಾವುದೇ ಪ್ರಸ್ತಾಪಗಳಿಲ್ಲ. ಈ ಹಿಂದೆ ಬಿಜೆಪಿ ರಾಜ್ಯ ಸರ್ಕಾರ ಪ್ರತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 5000 ನಿವೇಶನ-ವಸತಿಗಳನ್ನು ಬಡವರಿಗೆ ನೀಡುವುದಾಗಿ ತೀರ್ಮಾನಿಸಿತ್ತು. ರಾಜ್ಯ ಸರ್ಕಾರದ ತೀರ್ಮಾನವೂ ಸಹ ಪಾಲಿಕೆ ಬಜೆಟ್ ನಲ್ಲಿ ಪ್ರತಿಫಲನಗೊಂಡಿಲ್ಲ.

11. ಫುಟ್ ಪಾತ್ ಗಳನ್ನು ಸುಂದರಗೊಳಿಸಲು ಹಣ ಮೀಸಲಿಡಲಾಗಿದೆ. ಆದರೆ ಬೆಂಗಳೂರಿನ ದೊಡ್ಡ ಸಂಖ್ಯೆಯ ಜನ ಓಡಾಡುವ ಫುಟ್ ಪಾತ್ ಗಳನ್ನೇ ಕಬಳಿಸುವ ರೀತಿಯಲ್ಲಿ ರಸ್ತೆ ಅಗಲೀಕರಣ ಕೆಲಸ ನಡೆಯುತ್ತಿದೆ. ನೂತನವಾಗಿ ನಿರ್ಮಾಣವಾಗುತ್ತಿರುವ ರಸ್ತೆಗಳಂತೂ ಫುಟ್ ಪಾತ್ ಗಳೇ ಇಲ್ಲದಂತಿವೆ. ಈ ಬಗ್ಗೆ ಪಾಲಿಕೆ ಗಮನಹರಿಸುವುದನ್ನು ಬಿಟ್ಟು ಮಾಡಿದ್ದನ್ನೇ ಮತ್ತೊಮ್ಮೆ ಮಾಡುವ ಕಾಮಗಾರಿಗಳು, ಆ ಮೂಲಕ ಲೂಟಿ ಕಾರ್ಯಕ್ಕೆ ಯೋಜಿಸಲಾಗಿದೆ.

12. ಬೆಂಗಳೂರಿನ ಬಡವರು, ಅಸಂಘಟಿತ ಕಾರ್ಮಿಕರು, ದಲಿತರು, ಅಲ್ಪಸಂಖ್ಯಾತರು ಮಧ್ಯಮ ವರ್ಗಗಳಿಗೆ ಅಗತ್ಯವಾದ ಆಸ್ಪತ್ರೆ, ಶಾಲೆ, ಕ್ರೀಡೆ, ಮುಂತಾದವುಗಳನ್ನು ಬಜೆಟ್ ಬಹುತೇಕ ಕಡೆಗಣಿಸಿದೆ. ಶಿಕ್ಷಣ, ಕ್ರೀಡೆ, ಸಾಂಸ್ಕೃತಿಕ ವಿಷಯಗಳಿಗೆ ಬಜೆಟ್ನ ಶೇ.1 ರಷ್ಟು ಮೀಸಲಿಡುವ ಮೂಲಕ ಬಜೆಟ್ ಎಷ್ಟು ಜನ ವಿರೋಧಿ ಎಂಬುದನ್ನು ತೋರಿಸಿದೆ.

ಕಾರ್ಪೋರೇಷನ್ ಶಾಲೆಗಳನ್ನು ಆಧುನಿಕಗೊಳಿಸುವುದು ಮತ್ತು ಮೂಲಸೌಕರ್ಯಗಳನ್ನು ಒದಗಿಸುವುದು ಮುಂತಾದ ವಿಚಾರಗಳನ್ನು ಕಡೆಗಣಿಸಲಾಗಿದೆ. ಬದಲಿಗೆ
ICSE ಪಠ್ಯಕ್ರಮ ಜಾರಿಗೊಳಿಸುವ ಹೆಸರಲ್ಲಿ ಭಾರತೀಯ ವಿದ್ಯಾಭವನದ ಜೊತೆ ಹೊಂದಾಣಿಕೆ ಬಗ್ಗೆ ಹೇಳಲಾಗಿದೆ. ICSE ಪಠ್ಯಕ್ರಮ ಜಾರಿಗೊಳಿಸಲು ಭಾರತೀಯ ವಿದ್ಯಾಭವನದ ಅಗತ್ಯವೇನಿದೆ ? ಇದರ ಹಿಂದಿರುವ ಮರ್ಮವೇನು ?

13. ಬೆಂಗಳೂರಿನ ಜನತೆಗೆ ಕೈಗೆಟುಕುವ ಬೆಲೆಯಲ್ಲಿ ಆರೋಗ್ಯ ಸೇವೆಗಳನ್ನು ವ್ಯಾಪಕವಾಗಿ ವಿಸ್ತರಿಸುವ ಬದಲಿಗೆ ತೋರಿಕೆಗೆ ಸ್ವಲ್ಪ ಹಣವನ್ನು ತೋರಿಸಿ ಕೈಚೆಲ್ಲಿದೆ. ಆರೋಗ್ಯ ಸೇವೆಗಳ ಮೂಲಸೌಕರ್ಯವನ್ನು ವಿಸ್ತರಿಸುವ ಕಣ್ಣೋಟವೇ ಈ ಬಜೆಟ್ ಗಿಲ್ಲ. ಖಾಸಗಿಯವರ ತಿಜೋರಿ ತುಂಬಿಸಲು ಆರೋಗ್ಯ ವಿಮೆಯನ್ನು ಪ್ರಸ್ತಾಪಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಬಿಜೆಪಿಯ ಚೊಚ್ಚಲ ಪಾಲಿಕೆ ಬಜೆಟ್ ಮೇಲ್ನೋಟಕ್ಕೆ ಆಕರ್ಷಕವಾಗಿ ಕಾಣುವ ಆಂತರ್ಯದಲ್ಲಿ ಸಾಕಷ್ಟು ಜನವಿರೋಧಿ ಅಂಶಗಳನ್ನು ಒಳಗೊಂಡಿರುವ ಮತ್ತು ಧೀರ್ಘಾವಧಿಯಲ್ಲಿ ಜನತೆಯ ಮೇಲೆ ಹೆಚ್ಚಿನ ಹೊರೆಯನ್ನು ಹೊರಿಸುವ ಬಜೆಟ್ ಆಗಿದೆ.

(ಪ್ರಕಾಶ್ ಕೆ.)
ಜಿಲ್ಲಾ ಕಾರ್ಯದರ್ಶಿ
9448574389

ಕಾಮೆಂಟ್‌ಗಳಿಲ್ಲ: