8.17.2011

ಪ್ರಜಾಪ್ರಭುತ್ವದ ಮೇಲೆ ದಮನಕಾರಿ ಧಾಳಿ ಖಂಡಿಸಿ ಸಿಪಿಐ(ಎಂ) ಪ್ರತಿಭಟನೆ

ಲೋಕಪಾಲ್ ಮಸೂದೆ ಜಾರಿಗಾಗಿ ಆಗ್ರಹಿಸಿ ಉಪವಾಸ ಸತ್ಯಾಗ್ರಹ ನಡೆಸಲು ಉದ್ದೇಶಿಸಿದ್ದ ಅಣ್ಣ ಹಜಾರೆ ಮತ್ತು ಇತರರಿಗೆ ಪ್ರಜಾಸತ್ತಾತ್ಮಕವಾದ ಪ್ರತಿಭಟನೆಗೆ ಅವಕಾಶ ನೀಡದೆ ದಮನಕಾರಿ ನೀತಿ ಅನುಸರಿಸಿ ಚಳುವಳಿಕಾರರನ್ನು ಜೈಲಿಗೆ ಅಟ್ಟಿರುವ ಕೇಂದ್ರದ ಯು.ಪಿ.ಎ. ಸರ್ಕಾರದ ಧೋರಣೆಯನ್ನು ಖಂಡಿಸಿ ಸಿಪಿಐ(ಎಂ) ಬೆಂಗಳೂರು ಜಿಲ್ಲಾ ಸಮಿತಿ ನೇತೃತ್ವದಲ್ಲಿ ಇಂದು ಬೆಂಗಳೂರು ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ನೂರಾರು ಜನರ ಪ್ರತಿಭಟನೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ವಿ.ಜೆ.ಕೆ.ನಾಯರ್ ಮಾತನಾಡಿ 'ಲೋಕಪಾಲ್ ವ್ಯಾಪ್ತಿಗೆ ಪ್ರಧಾನಿಯವರನ್ನು ತರಬೇಕೆಂಬ ಬೇಡಿಕೆಗೆ ಸಿಪಿಐ(ಎಂ) ಬೆಂಬಲವಿದೆ. ಆದರೆ ಕೇಂದ್ರ ಸಕರ್ಾರ ಪ್ರಧಾನಿಯನ್ನು ಲೋಕಪಾಲ ವ್ಯಾಪ್ತಿಗೆ ತರಲು ಒಪ್ಪುತ್ತಿಲ್ಲ. ಇದು ದರೋಡೆಕೋರನನ್ನು ದರೋಡೆ ಮಾಡುವಾಗ ಹಿಡಿಯಬಾರದು ಆತ ದರೋಡೆ ಮುಗಿಸಿಕೊಂಡು ಹೋದ ಮೇಲೆ ಆತನ ವಿರುದ್ಧ ಮೊಕದಮ್ಮೆ ದಾಖಲಿಸಬಹುದು ಎಂದು ಹೇಳಿದಂತೆ ಇದೆ ಮತ್ತು ಸಿಬಿಐ ಯನ್ನು ಲೋಕಪಾಲ ಅಡಿಯಲ್ಲಿ ತರಬೇಕೆಂಬ ಬೇಡಿಕೆಗೂ ಸಿಪಿಐ(ಎಂ)ನ ಬೆಂಬಲವಿದೆ ಎಂದು ತಿಳಿಸಿದರು.

'ಭಾರಿ ಪ್ರಾಮಾಣಿಕ ಪ್ರಧಾನಿ ಮತ್ತು ಪ್ರಧಾನಿ ಹುದ್ದೆಯನ್ನೆ ತ್ಯಾಗಮಾಡಿದ ಸೋನಿಯಾ ಗಾಂಧಿಯವರಂತಹ ವ್ಯಕ್ತಿಗಳ ನಾಯಕತ್ವದಲ್ಲಿ ಭ್ರಷ್ಟಾಚಾರ ವಿರುದ್ಧ ದನಿ ಎತ್ತುವವರು ಜೈಲು ಪಾಲಾಗಬೇಕಾದ ಸನ್ನಿವೇಶ ಬಂದಿದೆ' ಎಂದು ಮತ್ತು ದೇಶದಲ್ಲಿ ಜಾಗತಿಕರಣ, ಉದಾರೀಕರಣ ನೀತಿಗಳು ಜಾರಿಗೆ ಬಂದ ಮೇಲೆ ಭ್ರಷ್ಟಾಚಾರ ತೀವ್ರ ಸ್ವರೂಪವನ್ನು ಪಡೆದಿದ್ದು 2 ಜಿ, ಕೆ.ಜಿ., ಸಿ.ಡಬ್ಲ್ಯೂ.ಜಿ. ಇತ್ಯಾದಿ ಹಗರಣಗಳಲ್ಲಿ ಲಕ್ಷಾಂತರ ಕೋಟಿ ರೂಪಾಯಿಗಳ ಲೂಟಿಯೇ ನಡೆದಿದೆ ಎಂದು ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಜಿ.ಎನ್.ನಾಗರಾಜ್  ತಿಳಿಸಿದರು.

ಕೇಂದ್ರ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುತ್ತಿರುವ ಬಿ.ಜೆ.ಪಿ. ಪಕ್ಷವು ರಾಜ್ಯದಲ್ಲಿ ನಡೆಯುತ್ತಿರುವ ಹಗರಣದ ಸರಮಾಲೆ ವಿರುದ್ಧ ದನಿ ಎತ್ತುತ್ತಿಲ್ಲ. ಬದಲಾಗಿ ಲೋಕಾಯುಕ್ತರು ಸಲ್ಲಿಸಿದ ವರದಿ ವಿರುದ್ಧವೇ ಮಾತನಾಡುತ್ತಾರೆ ಮತ್ತು ವರದಿಯ ವಿರುದ್ಧ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸುತ್ತಾರೆ. ದೇಶದಲ್ಲಿ ಈ ಪ್ರಮಾಣದ ಭ್ರಷ್ಟಾಚಾರ ಹೆಚ್ಚಲು ಕೇಂದ್ರದ ಯು.ಪಿ.ಎ. ಸರ್ಕಾರದಂತೆಯೇ ಬಿ.ಜೆ.ಪಿ. ಪಕ್ಷವು ನೇರ ಹೊಣೆ ಇದೆ ಎಂದು ಮುಖಂಡರು ತಿಳಿಸಿದರು.

ಪ್ರತಿಭಟನೆಗೆ ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರು ಎಸ್.ವೈ.ಗುರುಶಾಂತ್, ಜಿ.ಸಿ.ಬಯ್ಯಾರೆಡ್ಡಿ ಮತ್ತು ಜಿಲ್ಲಾ ಮುಖಂಡರಾದ ಪ್ರಕಾಶ್ ಕೆ., ಕೆ.ಎನ್.ಉಮೇಶ್, ಗೋಪಾಲಕೃಷ್ಣ ಭಾಗವಹಿಸಿದರು.

ಕಾಮೆಂಟ್‌ಗಳಿಲ್ಲ: