8.19.2011

ಆರೋಗ್ಯ-ಶಿಕ್ಷಣ-ಕಲ್ಯಾಣ ಕಡೆಗಣಿಸಿರುವ ಸಾಲದ ಶೂಲ ಬಿಬಿಎಂಪಿ ಬಜೆಟ್- ಸಿಪಿಐ(ಎಂ) ಖಂಡನೆ

ಇತಿಹಾಸದಲ್ಲಿಯೆ ಅತಿ ಹೆಚ್ಚು ಮೊತ್ತದ ರೂ.9,197 ಕೋಟಿಯ 2011-2012ರ ಸಾಲಿನ ಬಿಬಿಎಂಪಿ ಬಜೆಟ್ ಬಡ, ಮಧ್ಯಮ ಕೆಳ ವರ್ಗದ ಜನತೆಯನ್ನು ಕಡೆಗಣಿಸಿ, ನಾಗರೀಕರನ್ನು ಸಾಲದ ಶೂಲಕ್ಕೆ ಏರಿಸಿದೆ ಎಂದು ಸಿಪಿಐ(ಎಂ) ಖಂಡಿಸಿದೆ.

ಬಿಬಿಎಂಪಿಯು ವರ್ಷದಿಂದ ವರ್ಷಕ್ಕೆ ನಿರಂತರವಾಗಿ ಆರೋಗ್ಯ, ಶಿಕ್ಷಣ-ಸಂಸ್ಕೃತಿ ಮತ್ತು ಕಲ್ಯಾಣಕ್ಕೆ ಮೀಸಲಿಡುತ್ತಿರುವ ಹಣವನ್ನು ಕಡಿತ ಮಾಡುತ್ತಾ ಬಂದಿದೆ. ಪ್ರಸ್ತುತ ಬಜೆಟ್ ನಲ್ಲಿ ಆರೋಗ್ಯಕ್ಕೆ ಶೇ. 0.50, ಶಿಕ್ಷಣ ಸಂಸ್ಕೃತಿಗೆ ಶೇ.0.44, ಕಲ್ಯಾಣಕ್ಕೆ ಶೇ.6.01 ರಷ್ಟು ಹಣವನ್ನು ಮೀಸಲಿಟ್ಟಿದೆ. ಪಾಲಿಕೆಯ ಆಡಳಿತ ಬಿಜೆಪಿಗೆ ಒಳಪಟ್ಟ ನಂತರ ಇದು ತೀವ್ರವಾಗಿ ಕಡಿತವಾಗುತ್ತಾ ಬಂದಿದೆ. 2010-2011 ರಲ್ಲಿ ಆರೋಗ್ಯಕ್ಕೆ ಶೇ.4, ಶಿಕ್ಷಣ-ಸಂಸ್ಕೃತಿಗೆ ಶೇ.1, ಕಲ್ಯಾಣಕ್ಕೆ ಶೇ.7 ರಷ್ಟು ಹಣ ಮೀಸಲಿರಿಸಲಾಗಿತ್ತು. ಆದರೆ ಅದರ ಹಿಂದಿನ ಬಜೆಟ್ ನಲ್ಲಿ ಬಿಜೆಪಿ ಆಡಳಿತಕ್ಕೆ ಬರುವ ಮುನ್ನ 2009-2010 ರಲ್ಲಿ ಆರೋಗ್ಯಕ್ಕೆ ಶೇ.7 ಶಿಕ್ಷಣ-ಸಂಸ್ಕೃತಿಗೆ ಶೇ.2, ಕಲ್ಯಾಣಕ್ಕೆ ಶೇ.14 ರಷ್ಟು ಹಣ ಮೀಸಲಿಡಲಾಗಿತ್ತು.

ಅಂತೆಯೇ ಸಾಲ ಮರುಪಾವತಿಗೆ 2009-2010 ರಲ್ಲಿ ಶೇ.6, 2010-2011 ರಲ್ಲಿ ಶೇ.7 ರಷ್ಟಿದ್ದ ಬಜೆಟ್, 2011-2012 ರಲ್ಲಿ ಶೇ.7.18 ಕ್ಕೆ ಹೆಚ್ಚಳಗೊಂಡಿದೆ. ಗುತ್ತಿಗೆದಾರರಿಗೆ ನೀಡಬೇಕಾದ ಬಾಕಿ ಬಿಲ್ ರೂ.3000 ಕೋಟಿಗೂ ಹೆಚ್ಚಿರುವಾಗ, ಮತ್ತೆ ಸುಮಾರು ರೂ.1,000 ಕೋಟಿ ಸಾಲ ಪಡೆಯುವ ಪ್ರಸ್ತಾಪನೆ ಸೇರಿದರೆ, ಆಡಳಿತರೂಢ ಬಿಜೆಪಿಯು ನಗರದ ನಾಗರೀಕರನ್ನು ಸಾಲದ ಶೂಲಕ್ಕೆ ಏರಿಸಲು ಹೊರಟಿದೆ ಎಂದು ಸಿಪಿಐ(ಎಂ) ಬೆಂಗಳೂರು ಜಿಲ್ಲಾ ಸಮಿತಿ ಖಂಡಿಸಿದೆ.

ವಸತಿ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿರುವ ಸಂಖ್ಯೆ ಪ್ರತಿ ವಾರ್ಡ್ ನಲ್ಲೂ ಸಾವಿರಾರು ಸಂಖ್ಯೆಯಲ್ಲಿರುವಾಗ ಪಂಡಿತ್ ದೀನ್ ದಯಾಳ್ ಗೃಹ ಯೋಜನೆಯಡಿಯ ಪ್ರತಿ ವಾರ್ಡ್ ಗೆ 25 ಮನೆಗಳ ಪ್ರಸ್ತಾಪ ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಿದೆ. 7 ಲಕ್ಷ ಕುಟುಂಬಗಳ ಆರೋಗ್ಯ ಸೇವೆಗೆ ರೂಪಿಸಿರುವ ವಾಜಪೇಯಿ ಆರೋಗ್ಯ ಶ್ರೀ ವೈದ್ಯಕೀಯ ವಿಮಾ ಯೋಜನೆಗೆ 20 ಕೋಟಿ ರೂ. ಮೀಸಲಿಡಲಾಗಿದೆ, ಹಿಂದಿನ ಬಜೆಟ್ನ ಹೋಲಿಕೆಯಲ್ಲಿ ರೂ.88 ಲಕ್ಷ ವನ್ನು ಕಡಿತ ಮಾಡಿರುವುದು ಖಂಡನೀಯ ಎಂದಿದೆ ಸಿಪಿಐ(ಎಂ).

ಪ್ರಸಕ್ತ ಹಣಕಾಸು ವರ್ಷದ 5 ತಿಂಗಳು ಕಳೆದಿರುವಾಗ ಮಂಡಿಸಿರುವ ಬಜೆಟ್ ಜಾರಿಗೆ ಉಳಿದಿರುವುದು ಕೇವಲ 7 ತಿಂಗಳುಗಳು ಮಾತ್ರ. ಇಲ್ಲದ ಹಣಕ್ಕೆ ಇದೇ ಎಂದು ಈ ಹಿಂದಿನ ವರ್ಷದಲ್ಲೂ ದೊಡ್ಡ ಮೊತ್ತದ ಬಜೆಟ್ ಮಂಡಿಸಲಾಗಿತ್ತು. ಆದರೆ ಅದರ ಜಾರಿ ಎಷ್ಟಾಗಿದೆ ಎಂದು ಪರಿಶೀಲಿಸಿದಲ್ಲಿ ಬಜೆಟ್ನ ದೊಡ್ಡ ಗಾತ್ರ ಕೇವಲ ತೋರಿಕೆ ಎಂಬಂತಾಗಿದ್ದು. ಅದು ತೋರಿಕೆಯ ಬಜೆಟ್ ಆಗಿತ್ತು. ಈ ಬಾರಿಯು ಹಾಗೆ ಆಗುವ ಸಾಧ್ಯತೆಯೆ ಹೆಚ್ಚಿದೆ.
ಅಂತೆಯೇ ಹೊಸ ಯೋಜನೆಗಳಿಲ್ಲದ, ನಾಗರೀಕರು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳಾದ ಸಾರಿಗೆ ದಟ್ಟಣೆ, ವಸತಿ, ಕುಡಿಯುವ ನೀರು, ಮಳೆ ಪ್ರವಾಹ, ಪಡಿತರ, ಶಿಕ್ಷಣ, ಆರೋಗ್ಯದ ಪ್ರಶ್ನೆಗಳನ್ನು ಪರಿಹರಿಸುವ ಯಾವುದೇ ಭರವಸೆ ನೀಡದ ನಿರಾಶಾದಾಯಕ ಬಜೆಟ್ ಇದಾಗಿದೆ ಎಂದು ಸಿಪಿಐ(ಎಂ) ಜಿಲ್ಲಾ ಸಮಿತಿಯು ಖಂಡಿಸಿದೆ.

ಕಾಮೆಂಟ್‌ಗಳಿಲ್ಲ: