9.05.2011

ಶ್ರೀರಾಮುಲು ಶಾಸಕ ಸ್ಥಾನಕ್ಕೆ ರಾಜೀನಾಮೆ - ಜನಾರ್ದನ ರೆಡ್ಡಿ ಬಂಧನ ಸಿಪಿಐ(ಎಂ) ಪ್ರತಿಕ್ರಿಯೆ

ಆಂಧ್ರಪ್ರದೇಶದಲ್ಲಿ ನಡೆಯುತ್ತಿದ್ದ ಅಕ್ರಮ ಗಣಿಗಾರಿಕೆಯ ಕುರಿತು ತನಿಖೆ ನಡೆಸುತ್ತಿದ್ದ ಸಿಬಿಐ ಇಂದು ಬೆಳಿಗ್ಗೆ ರಾಜ್ಯದ ಮಾಜಿ ಸಚಿವ, ಬಳ್ಳಾರಿ ವಿಧಾನ ಪರಿಷತ್ ಸದಸ್ಯ ಜಿ. ಜನಾರ್ದನ ರೆಡ್ಡಿ ಅವರನ್ನು ಸಿಬಿಐ ಬಂಧಿಸಿ ವಿಚಾರಣೆಗೆ ಒಳಪಡಿಸಿರುವ ಕ್ರಮ ಸ್ವಾಗತಾರ್ಹವಾಗಿದೆ ಎಂದು ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಮಂಡಳಿ ಪ್ರತಿಕ್ರಿಯಿಸಿದೆ. ಆದರೆ ಕರ್ನಾಟಕದ ಲೋಕಾಯುಕ್ತರು ನೀಡಿದ ವರದಿಯಲ್ಲಿ ಬಳ್ಳಾರಿ ರೆಡ್ಡಿ ಸಹೋದರರ ವಿರುದ್ಧ ಮಾಡಿರುವ ಆರೋಪಗಳ ವಿಷಯದಲ್ಲಿ ಇದುವರೆಗೆ ಯಾವುದೇ ಕಾನೂನು ಕ್ರಮ ಜರುಗಿಸದಿರುವ ಬಗ್ಗೆ ಸಿಪಿಐ(ಎಂ) ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಕರ್ನಾಟಕ ಲೋಕಾಯುಕ್ತರು ಯ್ಯಾರರ ಮೇಲೆ ಆರೋಪಗಳನ್ನು ಮಾಡಿದ್ದಾರೆಯೋ ಅವರೆಲ್ಲರ ವಿರುದ್ಧ ಎಫ್.ಐ.ಆರ್. ದಾಖಲು ಮಾಡಿ, ಅವರೆಲ್ಲರನ್ನು ಬಂಧಿಸಿ ತನಿಖೆಗೆ ಒಳಪಡಿಸಬೇಕೆಂದೂ, ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಬೇಕೆಂದೂ ಹಾಗೂ ಕರ್ನಾಟಕದಲ್ಲಿ ನಡೆದಿರುವ ಅಕ್ರಮ ಗಣಿಗಾರಿಕೆಯ ಸಮಗ್ರವಾದ ತನಿಖೆಗಾಗಿ ಇಡೀ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕೆಂದೂ ಸಿಪಿಐ(ಎಂ) ಆಗ್ರಹಿಸುತ್ತದೆ.

ಯಡಿಯೂರಪ್ಪ ಸಂಪುಟದಲ್ಲಿ ಆರೋಗ್ಯ ಸಚಿವರಾಗಿದ್ದ ಶ್ರೀರಾಮುಲು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ರೆಡ್ಡಿ ಸಹೋದರರ ಆಣತಿಯಂತೆ ನಡೆದಿರುವ ಬೆಳವಣಿಗೆಯಾಗಿದೆ. ಸದಾನಂದಗೌಡರ ಮಂತ್ರಿ ಮಂಡಳದಲ್ಲಿ ಸ್ಥಾನ ಪಡೆಯುವುದೇ ಇದರ ಹಿಂದಿನ ಉದ್ದೇಶವಾಗಿದೆ. ರೆಡ್ಡಿ ಸಹೋದರರು ಪಕ್ಷದಲ್ಲಿ ಹಾಗೂ ಸರ್ಕಾರದಲ್ಲಿ ಕಳೆದುಕೊಂಡ ಪ್ರಭಾವವನ್ನು ಪುನಃ ಪಡೆದುಕೊಳ್ಳಲು ಶ್ರೀರಾಮುಲು ಮೂಲಕ ಒತ್ತಡ ತಂತ್ರ ಅನುಸರಿಸುತ್ತಿದ್ದಾರೆ. ಅಕ್ರಮ ಗಣಿಗಾರಿಕೆಯ ಮೂಲಕ ರಾಜ್ಯದ ಗಣಿ ಸಂಪತ್ತನ್ನು ಕೊಳ್ಳೆ ಹೊಡೆದಿರುವ ಇವರು ಶ್ರೀರಾಮುಲು ಅವರ ಪರಿಶಿಷ್ಠ ಪಂಗಡದ ಅನುಕಂಪಗಳಿಸುವ ಪ್ರಯತ್ನ ಇದಾಗಿದ್ದು ರಾಜ್ಯದ ಜನತೆ ಇಂತಹ ತಂತ್ರ ಕುತಂತ್ರಗಳಿಗೆ ಮೋಸ ಹೋಗಬಾರದೆಂದು ಸಿಪಿಐ(ಎಂ) ಮನವಿ ಮಾಡುತ್ತದೆ.


(ನಿತ್ಯಾನಂದಸ್ವಾಮಿ)
ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರು

ಕಾಮೆಂಟ್‌ಗಳಿಲ್ಲ: