ಮಾರ್ಕ್ಸ್ ವಾದಿ ಕಮ್ಯೂನಿಸ್ಟ್ ಪಕ್ಷದ ಬೆಂಗಳೂರು ಜಿಲ್ಲಾ 20ನೇ ಸಮ್ಮೇಳನವು ಡಿಸೆಂಬರ್ 4,5,6-2011 ರಂದು ನಗರದ ರಾಜಾಜಿನಗರದ ಡಾ||ರಾಜ್ ಕಲಾಕ್ಷೇತ್ರದಲ್ಲಿ ನಡೆಯಲಿದೆ. ಡಿಸೆಂಬರ್ 4 ರಂದು ಬೆಳಿಗ್ಗೆ 10 ಗಂಟೆಗೆ ಧ್ವಜಾರೋಹಣದೊಂದಿಗೆ ಬಹಿರಂಗ ಸಭೆಯು ನಡೆಯಲಿದೆ. ಬಹಿರಂಗ ಸಭೆಯಲ್ಲಿ ರಾಜ್ಯ ಮುಖಂಡರು ಮಾತನಾಡಲಿದ್ದಾರೆ. ನಂತರ ಜಿಲ್ಲೆಯ ಎಲ್ಲಾ ಪ್ರದೇಶಗಳು/ತಾಲ್ಲೂಕುಗಳಿಂದ ಆಯ್ಕೆಯಾದ 300 ಪ್ರತಿನಿಧಿಗಳು ಅಧಿವೇಶನದಲ್ಲಿ ಭಾಗವಹಿಸಲಿದ್ದಾರೆ.
ಬೆಂಗಳೂರು ಜಿಲ್ಲೆಯು ರಾಜ್ಯದ ರಾಜಧಾನಿಯಾಗಿ, ಅಂತರ್ರಾಷ್ಟ್ರೀಯ ಬಂಡವಾಳದ ಕೇಂದ್ರವಾಗಿ, ಜಾಗತೀಕರಣ-ಉದಾರೀಕರಣ-ಖಾಸಗೀಕರಣದ ಪ್ರಮುಖ ಪ್ರಯೋಗಶಾಲೆಯಾಗಿ ಮಾರ್ಪಡುತ್ತಿದೆ. ಇದರಿಂದ ಶೇ.90ರಷ್ಟಿರುವ ಕಾರ್ಮಿಕರು, ನೌಕರರು, ರೈತ-ಕೂಲಿಕಾರರು, ಅಸಂಘಟಿತರು, ಮಹಿಳೆಯರು, ದಲಿತರು, ಅಲ್ಪಸಂಖ್ಯಾತರು ಹೀಗೆ, ವಿವಿಧ ವಿಭಾಗದ ಸಾಮಾನ್ಯ ಜನರ ಬದುಕು ಸಂಕಷ್ಟಗಳಿಗೆ ಸಿಲುಕುತ್ತಿದೆ. ಎಲ್ಲಾ ಸಾರ್ವಜನಿಕ ಸೇವೆಗಳನ್ನು ಖಾಸಗಿ ಬಂಡವಾಳದ ಕೃಪೆಗೆ ಒಪ್ಪಿಸುವ ಕೆಲಸವನ್ನು ಬಿಜೆಪಿ ಸರ್ಕಾರ ಮಾಡುತ್ತಿದೆ. ಆರೋಗ್ಯ, ಶಿಕ್ಷಣ, ಮನೆ ಬಾಡಿಗೆ, ಸಾರಿಗೆ ಮುಂತಾದವು ದುಬಾರಿಯಾಗುತ್ತಿವೆ. ಎಲ್ಲಾ ಅಗತ್ಯ ವಸ್ತುಗಳ ಬೆಲೆಗಳು ಆಕಾಶ ನೋಡುತ್ತಿವೆ. ಮೂಲಭೂತ ಸೌಲಭ್ಯಗಳು ಮರೀಚಿಕೆಯಾಗುತ್ತಿವೆ.
ನಗರದ ಆದಾಯಗಳಲ್ಲಿ ಅಪಾರವಾದ ತಾರತಮ್ಯ ಮತ್ತು ಅಂತರ ಹೆಚ್ಚಾಗುತ್ತಿದೆ. ಕೆಲವೇ ಕೆಲವು ಶ್ರೀಮಂತರ ಆಸ್ತಿ-ಆದಾಯಗಳಲ್ಲಿ ಆಗಿರುವ ಹೆಚ್ಚಳವನ್ನು ತೋರಿಸಿ ಬೆಂಗಳೂರು ಜಗಮಗಿಸುತ್ತಿದೆ ಎನ್ನಲಾಗುತ್ತಿದೆ. ಆದರೆ ಬಹುದೊಡ್ಡ ಸಂಖ್ಯೆಯ ಸಾಧಾರಣ ಜನರ ಬದುಕಿನ ಸ್ಥಿತಿಗತಿಗಳನ್ನು ಮರೆಮಾಚಲಾಗಿದೆ. ಜೊತೆಗೆ ಜನರಿಗಾಗಿ ಬಳಸಬೇಕಾದ ಸಾವಿರಾರು ಕೋಟಿಗಳನ್ನು ಕಬಳಿಸಲಾಗುತ್ತಿದೆ. ಭ್ರಷ್ಟಾಚಾರಿಗಳ ಕೇಂದ್ರವೇ ಬೆಂಗಳೂರಿನಲ್ಲಿದೆ.
ಈ ಹಿನ್ನೆಲೆಯಲ್ಲಿ ಬಹುಸಂಖ್ಯಾತ ದುಡಿವ ಜನರ ಬದುಕಿನ ಸಮಸ್ಯೆಗಳ ಬಗ್ಗೆ ಸಮ್ಮೇಳನದಲ್ಲಿ ಚರ್ಚಿಸಲಾಗುವುದು. ಇದರ ಆಧಾರದಲ್ಲಿ ಮುಂದಿನ ದಿನಗಳಲ್ಲಿ ನಡೆಸಬೇಕಾದ ಚಳುವಳಿಗಳು, ಹೋರಾಟಗಳನ್ನು ತೀರ್ಮಾನಿಸಲಾಗುವುದು.
ಆದ್ದರಿಂದ ಸಮ್ಮೇಳನದ ಅಂಗವಾಗಿ ಡಿಸೆಂಬರ್ 4ರಂದು ನಡೆಯುವ ಬಹಿರಂಗ ಸಭೆಯಲ್ಲಿ ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮುಂದಿನ ಹೋರಾಟಗಳನ್ನು ರೂಪಿಸಲು ಬೆಂಬಲಿಸಬೇಕೆಂದು ಸಿಪಿಐ(ಎಂ) ಬೆಂಗಳೂರು ಜಿಲ್ಲಾ ಸಮಿತಿಯು ವಿನಂತಿಸುತ್ತದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ