12.09.2011

ಬಹುಕೋಟಿ ಹಗರಣ ಲೋಕಾಯುಕ್ತ ತನಿಖೆಗೆ ಒಪ್ಪಿಸಬೇಕೆಂದು ಬಿಬಿಎಂಪಿ ಕಛೇರಿ ಮುಂದೆ ಪ್ರತಿಭಟನೆ

ಬಿಬಿಎಂಪಿಯಲ್ಲಿ ನಡೆಯುತ್ತಿರುವ ಸಹಸ್ರಾರು ಕೋಟಿ ರೂ.ಗಳ ಹಗರಣಗಳು ಜನತೆಯನ್ನು ಬೆಚ್ಚಿಬೀಳಿಸುತ್ತಿವೆ. ನಗರದ ಮತ್ತು ಜನತೆಯ ಅಭಿವೃದ್ಧಿಯನ್ನು ಸಾಧಿಸಬೇಕಾದ ಪಾಲಿಕೆಯು ಅದರ ಬದಲಿಗೆ ಕೆಲವು ರಾಜಕಾರಣಿಗಳು, ಗುತ್ತಿಗೆದಾರರು ಮತ್ತು ಮಧ್ಯವರ್ತಿಗಳ ಸುಲಿಗೆಯ ಕೇಂದ್ರವಾಗಿ ಮಾರ್ಪಾಟಾಗಿದೆ. ಕೇವಲ 3 ವಿಧಾನಸಭಾ ಕ್ಷೇತ್ರಗಳಲ್ಲಿ ಮಾತ್ರವೇ ಅಭಿವೃದ್ಧಿ ಕಾಮಗಾರಿಗಳಲ್ಲಿ ರೂ.1539 ಕೋಟಿಗಳ ಅವ್ಯವಹಾರ-ಅಕ್ರಮ ನಡೆದಿರುವುದು ಬಯಲಿಗೆ ಬಂದಿದೆ. ಇನ್ನು ಇಡೀ ಬಿಬಿಎಂಪಿ ವ್ಯಾಪ್ತಿಯ ಉಳಿದೆಲ್ಲಾ ಕ್ಷೇತ್ರಗಳನ್ನು ಒಳಗೊಂಡಲ್ಲಿ ಈ ಹಗರಣದಲ್ಲಿನ ಒಟ್ಟು ಮೊತ್ತ ಅತಂಕವನ್ನುಂಟುಮಾಡುತ್ತದೆ.

ಈ ಕುರಿತು ತನಿಖೆಯನ್ನು ಮಹಾನಗರ ಕಾರ್ಯಪಡೆಗೆ ವಹಿಸಿದ ಮರುದಿನವೆ ಕಾಮಗಾರಿಗಳ ಕಡತ ಕಛೇರಿ ಬೆಂಕಿಗೆ ಆಹುತಿಯಾದ ಬೆಳವಣಿಗೆಗಳು ಹಲವಾರು ಅನುಮಾನಗಳಿಗೆ ಎಡೆ ಮಾಡಿವೆ. ಈ ಹಿಂದೆ ಇಂತಹ ಹತ್ತಾರು ಹಗರಣಗಳ ಕುರಿತು ತನಿಖೆಗೆ ಮತ್ತು ಕಾಮಗಾರಿಗಳೇ ಆರಂಭವಾಗದ ಬೆಳವಣಿಗೆಗಳನ್ನು ಪತ್ತೆ ಹಚ್ಚಿ ಸಾವಿರಾರು ಕೋಟಿ ರೂ.ಗಳನ್ನು ಬಿಬಿಎಂಪಿಗೆ ಉಳಿಸುವಲ್ಲಿ, ಎಲ್ಲಾ ಅಕ್ರಮಗಳ ಸಮಗ್ರ ತನಿಖೆಗೆ ಒತ್ತಾಯಿಸಿದ ಆಯುಕ್ತರಾದ ಶ್ರೀ ಸಿದ್ಧಯ್ಯರವರನ್ನು ದಿಢೀರೆಂದು ವರ್ಗಾಯಿಸಿರುವ ಸರ್ಕಾರದ ಕ್ರಮ ಖಂಡನೀಯವಾದದು.

ಈ ಬಗ್ಗೆ ಸಿಓಡಿ ತನಿಖೆಗೆ ಸಕರ್ಾರ ಆದೇಶಿಸಿರುವುದು ತಪ್ಪಿತಸ್ತರನ್ನು ಕಾಪಾಡುವ ಕ್ರಮವಾಗಿದೆ. ಚುನಾಯಿತ ಪ್ರತಿನಿಧಿಗಳ ಆಡಳಿತಕ್ಕೆ ಮುನ್ನ 2008-2010ರ ನಡುವೆ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ನಡೆದಿರುವ ಬಹುಕೋಟಿ ಹಗರಣ ಇದಾಗಿದ್ದು, ರಾಜ್ಯ ಸರ್ಕಾರದ ಉಸ್ತುವಾರಿಯಲ್ಲೇ ಈ ಬೃಹತ್ ಹಗರಣ ನಡೆದಿದೆ. ಆದ್ದರಿಂದ ಸಿಓಡಿ ತನಿಖೆಯು ಪ್ರಕರಣವನ್ನು ಮುಚ್ಚಿಹಾಕಲು ಸಹಾಯ ಮಾಡಿದಂತಾಗುತ್ತದೆ.

ಬಿಬಿಎಂಪಿಯ ಬಹುಕೋಟಿ ಹಗರಣವನ್ನು ಲೋಕಾಯುಕ್ತ ತನಿಖೆಗೆ ಒಪ್ಪಿಸಬೇಕು. ಹಿಂದಿನ ಆಯುಕ್ತರಾದ ಶ್ರೀ.ಸಿದ್ಧಯ್ಯನವರ ವರ್ಗಾವಣೆ  ರದ್ದುಪಡಿಸಬೇಕೆಂದು ಆಗ್ರಹಿಸಿ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ), ಬೆಂಗಳೂರು ಉತ್ತರ-ದಕ್ಷಿಣ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಟೌನ್ ಹಾಲ್ ನಿಂದ ಮೆರವಣಿಗೆ ಹೊರಟು ಬಿಬಿಎಂಪಿ ಕಛೇರಿ ಮುತ್ತಿಗೆ ಹಾಕಲಾಯಿತು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಬಿಬಿಎಂಪಿ ಆಯುಕ್ತರಾದ ಶಂಕರಲಿಂಗೇಗೌಡರವರು ಬಂದು ಮನವಿ ಸ್ವೀಕರಿಸಿ ತನಿಖೆ ಮತ್ತು ಕೆಲವೊಂದು ವಿಚಾರಗಳು ನನ್ನ ಕಾರ್ಯ ವ್ಯಾಪ್ತಿಗೆ ಬರುವುದಿಲ್ಲ. ಸರ್ಕಾರದ ತೀರ್ಮಾನವಾಗಿದೆ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಬೆಂ. ದಕ್ಷಿಣ ಜಿಲ್ಲಾ ಕಾರ್ಯದರ್ಶಿ ಪ್ರಕಾಶ್ ಕೆ., ಕಾರ್ಯದರ್ಶಿ ಮಂಡಳಿ ಸದಸ್ಯರಾದ ಕೆ.ಎನ್.ಉಮೇಶ್, ಟಿ.ಸುರೇಂದ್ರರಾವ್, ಉತ್ತರ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಗೌರಮ್ಮ, ಗೋಪಾಲಕೃಷ್ಣ ಅರಳಹಳ್ಳಿ, ಲೀಲಾವತಿ.ಟಿ ಹಾಗೂ ಸಿಪಿಐ(ಎಂ) ಕಾರ್ಯಕರ್ತರು ಭಾಗವಹಿಸಿದ್ದರು

ಕಾಮೆಂಟ್‌ಗಳಿಲ್ಲ: