4.28.2012

ಬೆಂಗಳೂರು ನಗರ ಕುಡಿವ ನೀರಿನ ಸಮಸ್ಯೆ ಶಾಶ್ವತ ಪರಿಹಾರಕ್ಕೆ ನೀರಿನ ಸಮಾವೇಶ

ಬೇಸಿಗೆ ಮಾತ್ರವಲ್ಲ ಮಳೆಗಾಲದಲ್ಲೂ ಬೆಂಗಳೂರಿನ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗುತ್ತಿದೆ. ಒಂದೆಡೆ ಹೆಚ್ಚುತ್ತಿರುವ ಜನಸಂಖ್ಯೆ, ಮತ್ತೊಂದೆಡೆ ನೀರು ಸರಬರಾಜಿನ ಅವ್ಯವಸ್ಥೆಯಿಂದಾಗಿ ಮುಂದಿನ ದಿನಗಳಲ್ಲಿ ಶುದ್ಧ ಕುಡಿಯುವ ನೀರಿನ ಸಾಧ್ಯತೆಗಳು ಇವೆಯಾ ಎಂಬ ಅನುಮಾನ ಕಾಡುತ್ತಿದೆ. ನೀರಿನ ಹೆಸರಲ್ಲಿ ರಾಜಕೀಯ ಮತ್ತು ಹಣ ಮಾಡುವ ದಂಧೆ ಹೆಚ್ಚಳವಾಗುತ್ತಿದೆ.


ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಪ್ರಕಾರವೇ 2015ರ ವೇಳೆಗೆ ಎಲ್ಲಾ ಯೋಜನೆಗಳು ಪೂರ್ಣವಾದ ಮೇಲೂ ಲಭ್ಯವಾಗುವ ನೀರು ದಿನಕ್ಕೆ 1470 ದಶಲಕ್ಷ ಲೀಟರ್ಗಳು ಮಾತ್ರ. ಇದೇ ಮಂಡಳಿಯ ಅಂದಾಜಿನ ಪ್ರಕಾರ 2021ನೇ ಇಸವಿಗೆ ದಿನಕ್ಕೆ 1800 ದಶಲಕ್ಷ ಲೀಟರ್ ಮತ್ತು 2036ನೇ ಇಸವಿಗೆ ದಿನಕ್ಕೆ 2500 ದಶಲಕ್ಷ ಲೀಟರ್ ಅವಶ್ಯಕತೆಯಿದೆ. ಅಂದರೆ ಸರಿಸುಮಾರು ಅರ್ಧ ದಷ್ಟು ನೀರಿನ ಗಂಭೀರ ಕೊರತೆ ಉಂಟಾಗಲಿದೆ. ಸ್ಪಷ್ಟ ಪರ್ಯಾಯಗಳನ್ನು ಕಂಡುಕೊಳ್ಳದಿದ್ದರೆ ನೀರಿಗೆ ಹಾಹಾಕಾರ ಉಂಟಾಗಲಿದೆ.


ಈ ಹಿನ್ನೆಲೆಯಲ್ಲಿ ನೀರಾವರಿ ತಜ್ಞರಾದ ಜಿ.ಎಸ್.ಪರಮಶಿವಯ್ಯನವರು ನೀಡಿರುವ ವರದಿಯಲ್ಲಿ ಸ್ಪಷ್ಟ ಪರ್ಯಾಯಗಳನ್ನು ಗುರುತಿಸಲಾಗಿದೆ. ಈಗ ಎಲ್ಲಾ ಮೂಲಗಳಿಂದ ಲಭ್ಯವಾಗುವ ನೀರಿನ ಪ್ರಮಾಣದಷ್ಟು ನೀರನ್ನು ಬೆಂಗಳೂರಿಗೆ ತರುವ ಸಾಧ್ಯತೆಗಳನ್ನು ಇವರು ಹೇಳಿದ್ದಾರೆ. ಆದ್ದರಿಂದ ಈ ಬಗ್ಗೆ ಚರ್ಚಿಸಿ ಜನಾಂದೋಲನವನ್ನು ರೂಪಿಸುವ ಬಗ್ಗೆ ಮಾರ್ಕ್ಸ್ ವಾದಿ ಕಮ್ಯೂನಿಸ್ಟ್ ಪಕ್ಷವು 29.04.2012ರಂದು(ನಾಳೆ) ನೀರಿನ ಸಮಾವೇಶವನ್ನು ಏರ್ಪಡಿಸಿದೆ.

ಇದರಲ್ಲಿ ನೀರಾವರಿ ತಜ್ಞರಾದ ಜಿ.ಎಸ್.ಪರಮಶಿವಯ್ಯ, ರೈತ ಮುಖಂಡರಾದ ಜಿ.ಸಿ.ಬಯ್ಯಾರೆಡ್ಡಿ ಮುಂತಾದವರು ವಿಷಯದ ಕುರಿತು ಮಾತನಾಡಲಿದ್ದಾರೆ

ಕಾಮೆಂಟ್‌ಗಳಿಲ್ಲ: