17.01.2008
ಪತ್ರಿಕಾ ಹೇಳಿಕೆ
ಸಮತಾ ಸೈನಿಕ ದಳದ ಕಾರ್ಯಕರ್ತರು ಒರಿಸ್ಸಾದಲ್ಲಿ ಕ್ರೈಸ್ತರ ಮೇಲೆ ನಡೆದ ದಾಳಿ ಖಂಡಿಸಿ ನಗರದಲ್ಲಿ ನಡೆಸುತ್ತಿದ್ದ ಧರಣಿಯ ಮೇಲೆ ಶ್ರೀರಾಮಸೇನೆಯ ಕಾರ್ಯಕರ್ತರು ನಡೆಸಿರುವ ಗೂಂಡಾ ಧಾಳಿಯನ್ನು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ) ಸಿಪಿಐ(ಎಂ) ಬೆಂಗಳೂರು ಜಿಲ್ಲಾ ಸಮಿತಿಯು ಉಗ್ರವಾಗಿ ಖಂಡಿಸಿದೆ.
ಶಾಂತಿಯುತ ಧರಣಿ ನಿರತರ ಮೇಲೆ ಕುಂಕುಮ ಎರಚಿ, ನಿಂದಿಸಿ ದಾಳಿ ನಡೆಸಿರುವ ಶ್ರೀರಾಮಸೇನೆ ಗೂಂಡಾಗಳ ಧಾಳಿಯು ಪ್ರಜಾಪ್ರಭುತ್ವ ವಿರೋಧಿ ಕ್ರಮವಾಗಿದೆ. ಶ್ರೀರಾಮ ಸೇನೆಯ ಕೋಮುವಾದಿ ಆಜೆಂಡಾವನ್ನು ಬಯಲುಗೊಳಿಸಿದೆ. ಶ್ರೀರಾಮನ ಹೆಸರಿನಲ್ಲಿ ಉಗ್ರ ಹಿಂದುತ್ವ ಪ್ರತಿಪಾದಿಸುವ ಶ್ರೀರಾಮಸೇನೆ, ಈ ಹಿಂದೆ ಪ್ರೀತಿ ಏಕೆ ಭೂಮಿ ಮೇಲಿದೆ ಸಿನಿಮಾದ ಹಾಡಿನ ನೆಪ ಮಾಡಿ ಸ್ಟೂಡಿಯೋ ಮೇಲೆ ಧಾಳಿ ನಡೆಸಿತ್ತು. ಸೇತು ಸಮುದ್ರಂ ಕುರಿತು ಕರುಣಾನಿಧಿ ಹೇಳಿಕೆ ನೆಪ ಮಾಡಿ ಅವರ ಪುತ್ರಿಯ ಮನೆಯ ಮೇಲೆ ಧಾಳಿ, ತಮಿಳುನಾಡು ಬಸ್ಸಿಗೆ ಬೆಂಕಿ-ಇಬ್ಬರ ಸಜೀವ ದಹನಕ್ಕೂ ಕಾರಣವಾಗಿತ್ತು ಎಂಬುದನ್ನು ಜನತೆ ಅರಿಯಬೇಕಿದೆ. ಬಸ್ಗೆ ಬೆಂಕಿ ಇಟ್ಟವರನ್ನು ಬಹಿರಂಗವಾಗಿ ಬೆಂಬಲಿಸಿ ಅಭಿನಂದನಾ ಮಾತುಗಳನ್ನು ಅದರ ಮುಖಂಡರೂ ಪತ್ರಿಕಾ ಗೋಷ್ಟಿಯಲ್ಲೇ ಹೇಳಿದ್ದರೂ ಎಂಬುದನ್ನು ಶಾಂತಿಪ್ರಿಯ ಜನತೆ ಜಾತ್ಯಾತೀತ-ಪ್ರಜಾಪ್ರಭುತ್ವ ಶಕ್ತಿಗಳು ಅರಿಯಬೇಕಿದೆ ಎಂದು ಸಿಪಿಐ(ಎಂ) ಮನವಿ ಮಾಡಿದೆ.
ಅಂತೆಯೆ ಉಗ್ರ ಹಿಂಧುತ್ವದ ಪ್ರತಿಪಾದಕರಾಗಿ ತ್ರಿಶೂಲ ಹಂಚಿಕೆಯಂತಹ ಕಾರ್ಯಕ್ರಮಗಳ ಮೂಲಕ ಯುವಜನತೆಯಲ್ಲಿ ಕೋಮು ವಿಷ ಬೀಜ ಬಿತ್ತುವ, ಅಸಹನೆ ಹೆಚ್ಚಿಸುವ ಕಾರ್ಯದಲ್ಲಿ ತೊಡಗಿರುವ ಶ್ರೀರಾಮಸೇನೆ ಗೂಂಡಾ ಪಡೆಯಂತೆ ವರ್ತಿಸುತ್ತಿರುವುದರ ಗಂಭೀರತೆಯನ್ನು ಅರಿತು, ಜನತೆಯು ಅಂತಹ ಶಕ್ತಿಗಳನ್ನು ತಿರಸ್ಕರಿಸಬೇಕೆಂದು ಸಿಪಿಐ(ಎಂ) ಮನವಿ ಮಾಡಿದೆ. ವಾಕ್ ಸ್ವತಂತ್ರ, ಪ್ರತಿಭಟನೆಯ ಹಕ್ಕುಗಳನ್ನು ಮೊಟಕುಗೊಳಿಸುವ ಸಂವಿಧಾನೇತ್ತರ ಶಕ್ತಿಯಾಗಲು ನಿರಂತರ ಯತ್ನ ನಡೆಸಿರುವ ಸಂವಿಧಾನ ಬಾಹಿರ ಸಂಘಟನೆಯಾಗಿರುವ ಶ್ರೀರಾಮಸೇನೆಯ ಮೇಲೆ ಕ್ರಮವಹಿಸಬೇಕೆಂದು ಸಿಪಿಐ(ಎಂ) ಸರ್ಕಾರವನ್ನು ಒತ್ತಾಯಿಸಿದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ