10.18.2010

ಭೂ ಹಗರಣ - ಮುಖ್ಯಮಂತ್ರಿ ರಾಜೀನಾಮೆಗೆ ಸಿಪಿಐ(ಎಂ) ಒತ್ತಾಯ

ಬೆಂಗಳೂರಿನ ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಭೂಮಿ ಹಗರಣದಲ್ಲಿ ಸಿಲುಕಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ವಸತಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡುರವರು ಕೂಡಲೇ ರಾಜಿನಾಮೆ ನೀಡಬೇಕೆಂದು ಸಿಪಿಐ(ಎಂ) ಜಿಲ್ಲಾ ಸಮಿತಿ ಒತ್ತಾಯಿಸಿದೆ. ಅದೇ ಸಂದರ್ಭದಲ್ಲಿ ಇಡೀ ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ಸಿಪಿಐ(ಎಂ) ಆಗ್ರಹಿಸಿದೆ.

ರಾಜ್ಯದ ರಾಜಕೀಯ ಇತಿಹಾಸದಲ್ಲಿ ಮುಖ್ಯಮಂತ್ರಿಯೊಬ್ಬರು ತನ್ನ ಮಕ್ಕಳಿಗೆ ಪಕ್ಷಪಾತ ತೋರಿಸಿ ಪುರಾವೆ ಸಹಿತ ಸಿಕ್ಕಿ ಬಿದ್ದಿರುವುದು ಇದೇ ಮೊದಲು. ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿಯವರು ನೀಡಿದ ಸ್ಪಷ್ಟೀಕರಣವು ತೃಪ್ತಿಕರವಾಗಿಲ್ಲ. ಭೂಸ್ವಾಧೀನ ಕಾಯ್ದೆ ಕಲಂ 48(1) ರಂತೆ ಭೂಮಿಯನ್ನು ಭೂಸ್ವಾಧೀನದಿಂದ ಕೈ ಬಿಡಲು ಅವಕಾಶವಿದೆಯಾದರೂ ಇಲ್ಲಿ ಪಕ್ಷಪಾತ ತೋರಿಸಿರುವುದು ಸ್ವಂತ ಮಕ್ಕಳಿಗೆ. ಅದರಲ್ಲಿ ಒಬ್ಬರು ಲೋಕಸಭಾ ಸದಸ್ಯರೂ ಆಗಿರುತ್ತಾರೆ.

ಅದೇ ರೀತಿ ವಸತಿ ಸಚಿವರಾದ ಕಟ್ಟಾ ಸುಬ್ರಮಣ್ಯ ನಾಯ್ಡುರವರು ಕೆಐಎಡಿಬಿಯಿಂದ ಪರಿಹಾರ ಹಣವನ್ನು ತನ್ನ ಮಕ್ಕಳು ಪಡೆದಿರುವುದಾಗಿ ಒಪ್ಪಿಕೊಂಡಿರುತ್ತಾರೆ. ಆದರೆ ಖರೀದಿಸಿದ ಜಮೀನು ಸರಕಾರಕ್ಕೆ ಸೇರಿದ್ದು ಎಂದು ತಿಳಿದಿರಲಿಲ್ಲ ಎಂದು ಹೇಳುತ್ತಾರೆ. ಇದನ್ನು ಒಪ್ಪಿಕೊಳ್ಳಲು ಸಾದ್ಯವಿಲ್ಲ. ಆದ್ದರಿಂದ ಈ ಎರಡೂ ಹಗರಣಗಳಲ್ಲಿ ಮುಖ್ಯಮಂತ್ರಿಗಳು ಮತ್ತು ವಸತಿ ಸಚಿವರು ಪಕ್ಷಪಾತ ತೋರಿರುವುದು ಮೇಲ್ನೋಟಕ್ಕೆ ಸಾಬೀತಾಗತ್ತದೆ.

ರಾಜ್ಯದಲ್ಲಿ ಹಿಂದೆಂದೂ ಕಂಡರಿಯದ ರೀತಿಯಲ್ಲಿ ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಕೋಮುವಾದ ಮತ್ತು ಜನವಿರೋಧಿ ನೀತಿಗಳಿಂದ ಕುಖ್ಯಾತಿಯಾಗಿರುವ ಬಿಜೆಪಿ ಸಕರ್ಾರವು ತೊಲಗುವುದು ಜನತೆಯ ಮತ್ತು ರಾಜ್ಯದ ಒಟ್ಟಾರೆ ಹಿತದೃಷ್ಟಿಯಿಂದ ಅಗತ್ಯವಾಗಿದೆ ಎಂಬುದನ್ನು ಗಮನಿಸಬೇಕಾಗಿದೆ. ಮಾನ್ಯ ರಾಜಪಾಲರು ಬಿಜೆಪಿ ಸಕರ್ಾರಕ್ಕೆ ವಿಶ್ವಾಸಮತ ಸಾಬೀತುಪಡಿಸಲು ಅ.12ಕ್ಕೆ ದಿನಾಂಕ ನಿಗದಿಪಡಿಸಿದ್ದರೂ ಸಹ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಗೌರವಯುತವಾಗಿ ರಾಜೀನಾಮೆ ನೀಡಿ ನಿರ್ಗಮಿಸುವುದು ಪ್ರಸಕ್ತ ಸನ್ನಿವೇಶದಲ್ಲಿ ಅಗತ್ಯವೆಂದು ಸಿಪಿಐ(ಎಂ) ಭಾವಿಸುತ್ತದೆ.

ಆದ್ದರಿಂದ ಅವರಿಬ್ಬರೂ ರಾಜಿನಾಮೆ ನೀಡಲೇಬೇಕು. ಹಾಗೂ ಎರಡೂ ಹಗರಣಗಳನ್ನು ಸಿಬಿಐಗೆ ಒಪ್ಪಿಸಬೇಕೆಂದು ಸಿಪಿಐ(ಎಂ) ಇಂದು(06-10-2010) ರಾಜ್ಯಾದ್ಯಂತ ಪ್ರತಿಭಟನೆ ನಡೆಸಿ ಒತ್ತಾಯಿಸಿದೆ. ಇಂದು ನಗರದ ಟೌನ್ಹಾಲ್ ಬಳಿ ನಡೆದ ಪ್ರತಿಭಟನೆಯಲ್ಲಿ ಸಿಪಿಐ(ಎಂ)ನ ರಾಜ್ಯ ಮತ್ತು ಜಿಲ್ಲಾ ಮುಖಂಡರು, ಪ್ರಗತಿಪರ ಸಂಘಟನೆಗಳ ಮುಖಂಡರು, ಹಾಗೂ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.

ಕಾಮೆಂಟ್‌ಗಳಿಲ್ಲ: