ಭ್ರಷ್ಟಾಚಾರಗಳ ವಿರುದ್ಧ ಎದ್ದೇಳಿ - ಕರ್ನಾಟಕವನ್ನು ಉಳಿಸಿ
ಸಿಪಿಐ(ಎಂ) ಪ್ರಚಾರಾಂದೋಲನ
"ದೇಶದಲ್ಲೇ ಅತ್ಯಂತ ಹೆಚ್ಚು ಭ್ರಷ್ಟತೆ ತುಂಬಿ ತುಳುಕುತ್ತಿರುವ ರಾಜ್ಯ" ಕರ್ನಾಟಕ ಎಂಬ ಖ್ಯಾತಿ ಇತ್ತೀಚಿಗೆ ಲಭಿಸಿದೆ. ಹಿಂದಿದ್ದ ಭ್ರಷ್ಟ ಸರ್ಕಾರಗಳ ಎಲ್ಲಾ ಅಂಕಿ-ಅಂಶಗಳನ್ನು ಮೀರಿ, ಭ್ರಷ್ಟಾಚಾರವೇ ಗುರಿ-ದಾರಿ-ವಿಧಾನವಾಗಿ "ಪ್ರಥಮ ಸ್ಥಾನ" ಸಾಧಿಸಿದ ಕೀರ್ತಿ ಯಡಿಯೂರಪ್ಪ ಬಿಜೆಪಿ ಸರ್ಕಾರಕ್ಕೆ ಸಲ್ಲುತ್ತದೆ.
ಅನೈತಿಕ-ಭ್ರಷ್ಟ ರಾಜಕಾರಣದ ಪರಮಾವಧಿ
ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಸರ್ಕಸ್ ಅಸಹ್ಯ ಹುಟ್ಟಿಸಿದೆ. ರಾಜ್ಯದ ಸಂಪತ್ತಿನ "ವಾತಾಪಿ ಜೀರ್ಣೋಭವ"ಕ್ಕೆ ನಿಂತಿರುವ ಗಣಿ ಮತ್ತು ಭೂಮಿ ಕಳ್ಳರು ನಮ್ಮ-ನಿಮ್ಮೆಲ್ಲರ ಬದುಕಿನ ಸೂತ್ರಧಾರಿಗಳಾಗಿದ್ದಾರೆ ! ಜೈಲಿನಲ್ಲಿ ಇರಬೇಕಾದ ಹಲವಾರು ಕ್ರಿಮಿನಲ್ ಗಳು ಮಂತ್ರಿ-ಮಹೋದಯರಾಗಿಬಿಟ್ಟಿದ್ದಾರೆ ! ಬಿಜೆಪಿಯ ಯಡಿಯೂರಪ್ಪನವರ ಮೂಲಕ ಇದೆಲ್ಲವೂ ಶಿಖರ ತಲುಪಿದೆ.
* 2 ರೂ.ಗೆ ಕೆ.ಜಿ. ಅಕ್ಕಿ ಎಂದಿದ್ದರು. ಈ ವಿಚಾರದಲ್ಲಿ ಬಿಜೆಪಿಯವರಿಗೆ ಜ್ಞಾಪಕಶಕ್ತಿ ಕಳೆದು ಹೋಗಿದೆ. ಆದರೆ ಜಾತಿ ಸಂಘಗಳು, ಮಠ-ಮಾನ್ಯಗಳು, ದೇವಸ್ಥಾನಗಳಿಗೆ ನೂರಾರು ಕೋಟಿ ದಾನ ನಡೆದಿದೆ. ಯಾರದೋ ದುಡ್ಡು ಎಲ್ಲಮ್ಮನ ಜಾತ್ರೆ. ಈ ಸರ್ಕಾರದಷ್ಟು ಹಣ ಪೋಲು ಮಾಡಿದ ಇನ್ನೊಂದು ಸರ್ಕಾರ ರಾಜ್ಯದ ಚರಿತ್ರೆಯಲ್ಲಿಲ್ಲ.
* ರೈತರ ಹೆಸರಲ್ಲಿ ಪ್ರಮಾಣ ಮಾಡುತ್ತಲೇ ಹಾವೇರಿಯಲ್ಲಿ ಗೋಲಿಬಾರ್ ಮಾಡಿ ರೈತರನ್ನು ಕೊಂದರು.
* ರೈತರಿಗೆ ಉಚಿತ ವಿದ್ಯುತ್ ಎಂದರು ; ಉಚಿತ ಇರಲಿ, ನೆಟ್ಟಗೆ 6 ಗಂಟೆ ನಿರಂತರ ವಿದ್ಯುತ್ತೂ ಇಲ್ಲ. ಖಾಸಗಿ ವಿದ್ಯುತ್ ಖರೀದಿಯಲ್ಲಿ ಲೂಟಿ. ಜೊತೆಗೆ ದರ ಏರಿಕೆಯ ಬರೆ.
* ಕಳೆದ ವರ್ಷ ಮಳೆ ಪ್ರವಾಹಕ್ಕೆ ಸಿಕ್ಕಿ ನಿರಾಶ್ರಿತರಾದ ಲಕ್ಷಾಂತರ ಮಂದಿಗೆ ಈ ವರ್ಷದ ಮಳೆ ಮುಗಿಯುತ್ತಿದ್ದರೂ, ಮನೆ ಕಟ್ಟುವ ಕಾಯಕ ಮುಗಿದೇ ಇಲ್ಲ. ನೂರಾರು ಕೋಟಿ ನುಂಗುವ ಕಾಯಕದಲ್ಲಿ ಮನೆ ಕಟ್ಟುವ ಮಾತೆಲ್ಲಿ-ಬಿಡುವೆಲ್ಲಿ ?
* 2003-2004 ರಿಂದ 2010 ಏಪ್ರಿಲ್ವರೆಗೆ ಸು. 3.5 ಕೋಟಿ ಟನ್ ಕಬ್ಬಿಣದ ಅದಿರು ಅಕ್ರಮವಾಗಿ ರಫ್ತಾಗಿದೆ. ಇದರಲ್ಲಿ ಬಿಜೆಪಿ ಬಂದ ನಂತರವೇ ಸು.1.5 ಕೋಟಿ ಟನ್ ಅಕ್ರಮ ರಫ್ತಾಗಿದೆ. ಇದರ ಮೌಲ್ಯ ಸುಮಾರು 22,500 ಕೋಟಿ ರೂ.ಗಳು. ಇದರಲ್ಲಿ ರೆಡ್ಡಿ ಸಹೋದರರದೇ ಸಿಂಹಪಾಲು. ಈ ಕಳ್ಳ ಕುರುಡು ಕಾಂಚಾಣದ ಮಹಿಮೆಯೇ ಆಪರೇಷನ್ ಕಮಲ.
* ಇಂತಹ ಹೊಲಸು ಹಣದ ಹೊಳೆ ಹರಿಸಿದರೂ ಬಿಜೆಪಿಗೆ ಬಹುಮತ ಸಿಗಲಿಲ್ಲ. ಆಗ ಮಾಡಿದ್ದು ಪ್ರಜಾಪ್ರಭುತ್ವ ಬುಡಮೇಲು ಮಾಡುವ ಆಪರೇಷನ್ ಕಮಲ. ಅಧಿಕಾರ, ಹಣ, ಸ್ಥಾನಮಾನಗಳ ಆಮಿಷವೊಡ್ಡಿ ಶಾಸಕರನ್ನು ಪಟಾಯಿಸಿದ ಬಿಜೆಪಿ, ತಾನೇ ತೋಡಿದ ಹೊಂಡದಲ್ಲಿ ಬಿದ್ದು ಒದ್ದಾಡಿದ್ದು ಎಷ್ಟು ಬಾರಿ ! ಕಳೆದೆರೆಡೂವರೆ ವರ್ಷಗಳು ರಾಜ್ಯದಲ್ಲಿ ಆಡಳಿತವೇ ಇಲ್ಲದಂತಾಯ್ತು.
ಹಗರಣಗಳ ಸಾಲೇ....... ಬಿಜೆಪಿ ಕೊರಳಿನ ಮಾಲೇ :
* ಒಬ್ಬರ ನಂತರ ಒಬ್ಬರಂತೆ ಎಷ್ಟು ಮಂತ್ರಿಗಳು ರಾಜೀನಾಮೆ ನೀಡಿದ್ದು ! ಏತಕ್ಕಾಗಿ..... ನಕಲಿ ಹೆಸರಲ್ಲಿ ಬ್ಯಾಂಕಿಗೆ ವಂಚನೆ. ಕೆಐಎಡಿಬಿಗೆ ವಂಚನೆ-ರೈತರಿಗೆ ಟೋಪಿ ಹಾಕಿದ್ದಕ್ಕಾಗಿ ಕೃಷ್ಣಯ್ಯಶೆಟ್ಟಿ, ವೈದ್ಯಕೀಯ ಕಾಲೇಜು ನೇಮಕಾತಿ ಹಗರಣದಲ್ಲಿ ಲಂಚ ಸ್ವಜನ ಪಕ್ಷಪಾತಕ್ಕಾಗಿ ರಾಮಚಂದ್ರೇಗೌಡ, ಸ್ನೇಹಿತನ ಹೆಂಡಿತಿಯನ್ನೇ ಅತ್ಯಾಚಾರ ಮಾಡಿದ್ದಕ್ಕಾಗಿ ಹಾಲಪ್ಪ..... ಇವರ ಸಾಧನೆಗಳೇನು ಕಡಿಮೆಯೇ ?
* ದೇವನಹಳ್ಳಿ ಬಳಿ ರೈತರಿಂದ ಎಕರೆಗೆ 5-10 ಲಕ್ಷಕ್ಕೆ ಖರೀದಿಸಿ ಕೆಐಎಡಿಬಿಗೆ 45 ಲಕ್ಷಕ್ಕೆ ಮಾರಿದ ಕಟ್ಟಾ ಸುಬ್ರಮಣ್ಯ ನಾಯ್ಡು ಮತ್ತು ಕಟುಂಬ, ಅದಕ್ಕಾಗಿ ಜೈಲು ನೋಡಿ ಬಂದ ಕಟ್ಟಾ ಮಗ ಜಗದೀಶ್, ಕುಟುಂಬಕ್ಕಾಗೇ ಡಿನೋಟಿಫೈ ಮಾಡಿಕೊಂಡ ಮುಖ್ಯಮಂತ್ರಿ (ಬೋಗಸ್ ಸಹಿ ಹಗರಣವೂ ಇದೆ) ಇಂತಹ ಕಾಯಕದಲ್ಲಿ ನಿರತರಾದ ಮಂತ್ರಿ-ಶಾಸಕರು....
* ಬಡವರಿಗೆ ನಿವೇಶನ-ವಸತಿ ನೀಡಲಾಗದ ಸಕರ್ಾರ ಬಿಜೆಪಿಯ ಕೋಟ್ಯಾಧೀಶ ಶಾಸಕರಿಗೆ ಬಿಡಿಎ ನಿವೇಶನಗಳ ಹಂಚಿಕೆ. ಶೃಂಗೇರಿಯಲ್ಲಿ ರೈತರಲ್ಲದವರಿಗೆ ಬಗರ್ ಹುಕುಂ ಭೂಮಿಯನ್ನು ಹಂಚಿದ್ದು, ಬೆಂಗಳೂರು ಸುತ್ತ ಮುತ್ತ ನೋಟಿಫೈ-ಡಿನೋಟಿಫೈ ದಂದೆ........ ಇವಕ್ಕೇನಾದರೂ ಲೆಕ್ಕವಿದೆಯೇ ?
* ಪೊಲೀಸ್ ವರ್ಗಾವಣೆಯಲ್ಲಿ ಲೂಟಿ, ಶಿಕ್ಷಕರ ವರ್ಗಾವಣೆಯಲ್ಲಿ ಲೂಟಿ, ಅಧಿಕಾರಿಗಳ ವರ್ಗಾವಣೆಯಲ್ಲಿ ದಂಧೆ, ಗ್ರಾಮೀಣ ಉದ್ಯೋಗ ಖಾತ್ರಿಯಲ್ಲಿ ಕೆಲಸವೇ ಮಾಡಿಸದೆ ಕೋಟ್ಯಾಂತರ ಗುಳುಂ, ಖಾಸಗಿ ಶಿಕ್ಷಣ ಲಾಬಿಗಳಿಗೆ ಮಣಿದು ಹೆಚ್ಚುವರಿ ಪೇಮೆಂಟ್ ಸೀಟುಗಳು..... ಒಂದೇ.. ಎರಡೇ... ?
* ಬಿಬಿಎಂಪಿಯಲ್ಲಿ ರಾತ್ರೋರಾತ್ರಿ ಟೆಂಡರ್ ನಲ್ಲಿ ಸಾವಿರಾರು ಕೋಟಿ ಗುಳುಂ, ನಡೆಯದ ಕಾಮಗಾರಿಗಳಿಗೆ ನಕಲಿ ವರ್ಕ್ ಕೋಡ್ ನಲ್ಲಿ ನೂರಾರು ಕೋಟಿ ಮಾಯಂ, ಭಿಕ್ಷುಕರ ಪುನರ್ವಸತಿ ಹೆಸರಲ್ಲಿ ಕೋಟ್ಯಾಂತರ ಲೂಟಿ, ಅಂಗಾಂಗಗಳ ಮಾರಾಟ ಶಂಕೆ ....
* ಭ್ರಷ್ಟಾಚಾರದ ವಿರುದ್ಧ ಮಾತನಾಡಿದರೆ ಉಳಿಗಾಲವಿಲ್ಲ...... ಬೇಲೆಕೇರಿ ಬಂದರಿನಲ್ಲಿದ್ದ 6 ಲಕ್ಷ ಟನ್ ಅಕ್ರಮ ಅದಿರು ನಾಪತ್ತೆ ! ಇದನ್ನು ಪತ್ತೆ ಮಾಡಿದ ಅಧಿಕಾರಿಗೆ ಅಮಾನತು ! ಬಳ್ಳಾರಿ ಗಣಿಯಾಗಲೀ, ಬೆಂಗಳೂರಿನ ಭೂಮಿಯಾಗಲೀ ಪ್ರಾಮಾಣಿಕರು ಇರುವಂತಿಲ್ಲ. ರಾಜ್ಯದ ನೆಲ-ಜಲ ರಕ್ಷಿಸುವ ಸಮರ್ಥ ದೇಶಭಕ್ತರಿವರು !
* ಲೋಕಾಯುಕ್ತರಂತ ಲೋಕಾಯುಕ್ತರೇ ರಾಜೀನಾಮೆ ನೀಡಬೇಕಾದ ಪರಿಸ್ಥಿತಿ..... ಕೆಐಎಡಿಬಿ ಭೂಸ್ವಾಧೀನ ಹಗರಣದ ಕುರಿತ ಲೋಕಾಯುಕ್ತರ ತನಿಖೆಗೆ ಅಸಹಕಾರ. ಹೇಳಿ ಜನರೇ ...... ಬಿಜೆಪಿಯನ್ನು ಮೀರಿಸುವವರ್ಯಾರು ?
* ಅಂತೂ, ಯಡಿಯೂರಪ್ಪನ ಕಾಲದಲ್ಲಿ ಭ್ರಷ್ಟ ಸಚಿವರು, ದುಷ್ಟ ಸಂಬಂಧಿಗಳು, ಲಂಚಕೋರ ಅಧಿಕಾರಿಗಳು, ಲೂಟಿಕೋರ ಕಂಟ್ರಾಕ್ಟರ್ ಗಳು, ಭೂಗಳ್ಳರು, ಗಣಿ ಮಾಫಿಯಾಗಳು ನಡೆಸಿದ್ದಾರೆ ಆಡಳಿತ. ಈಗ ಶಾಸಕರ ರೆಸಾರ್ಟ್ ಹುಚ್ಚಾಟಗಳು-ಮಂಗಾಟಗಳು ಅಸಹ್ಯ ಪಡುವಷ್ಟು ನಡೆದಿವೆ. ಮತ್ತೊಮ್ಮೆ ಆಪರೇಷನ್ ಕಮಲ ಭರ್ಜರಿಯಾಗಿ ನಡೆದಿದೆ. 25-50 ಕೋಟಿಗೆ ಮಾರಾಟವಾಗುತ್ತಿರುವ ಕಾಂಗ್ರೆಸ್-ಜೆಡಿಎಸ್-ಬಿಜೆಪಿ ಶಾಸಕರಿಗೆ ಇರುವ ನಿಷ್ಟೆಯಾದರೂ ಯಾವುದು ? ಜನರ ಬಗ್ಗೆ ಇವರಿಗೆ ಕಾಳಜಿಯಾಗಲೀ, ಪ್ರಜಾಪ್ರಭುತ್ವದ ಬಗ್ಗೆ ನಂಬಿಕೆಯಾಗಲೀ ಇಲ್ಲ. ಇವರ ಕೈಯಲ್ಲಿ ರಾಜ್ಯಕ್ಕೆ ಖಂಡಿತಾ ರಕ್ಷಣೆಯಿಲ್ಲ.
* ಆರ್.ಎಸ್.ಎಸ್.ನ ನೈತಿಕ ಪಾಠ ಕೇಳಿಕೊಂಡು ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರವಿದು ! ಅವರಿಗೆ ತಕ್ಕಂತೆ ನಡೆಯುತ್ತಿಲ್ಲ ಎನ್ನಲು ಸಾಧ್ಯವೇ !
ಜನರ ಸಮಸ್ಯೆಗಳಿಗೆ ಪರಿಹಾರ ; ಸಿಪಿಐ(ಎಂ)ನ ಪರ್ಯಾಯ
ಬಂಡವಾಳದಾರರ -ಶ್ರೀಮಂತರ ಪರವಾದ ಪಕ್ಷಗಳು ಹೀಗಲ್ಲದೆ ಬೇರೆ ರೀತಿ ಇರಲು ಸಾಧ್ಯವಿಲ್ಲ. ಲೂಟಿ ನಡೆಸದೆ ಅವುಗಳಿಗೆ ಉಳಿಗಾಲವಿಲ್ಲ. ಇವರು ಜನರನ್ನು ಕೇವಲ ಮಾರಾಟದ ವಸ್ತುಗಳನ್ನಾಗಿ ಮಾತ್ರ ನೋಡುತ್ತಾರೆ. ಇವೆಲ್ಲಕ್ಕೂ ಭಿನ್ನವಾಗಿ ಮಾರ್ಕ್ಸ್ ವಾದಿ ಕಮ್ಯುನಿಸ್ಟ್ ಪಕ್ಷ ದುಡಿಯುವ ಜನರ ಸಾಮಾನ್ಯರ ಪರವಾದ ರಾಜಕಾರಣವನ್ನು ಮಾಡುತ್ತಿದೆ. ಪ್ರತಿಯೊಂದು ವಿಚಾರದಲ್ಲೂ ನಿರ್ದಿಷ್ಟ ಜನಪರ ಪರ್ಯಾಯಗಳನ್ನು ಹೊಂದಿದೆ.
* ಪಶ್ಚಿಮ ಬಂಗಾಳದಲ್ಲಿ ಸಿಪಿಐ(ಎಂ) ನೇತೃತ್ವದಲ್ಲಿ 34 ವರ್ಷಗಳಿಂದ ಆಡಳಿತವಿದೆ. ಇಷ್ಟು ವರ್ಷಗಳಲ್ಲಿ ಒಬ್ಬ ಶಾಸಕ ಅಥವಾ ಮಂತ್ರಿಯ ಮೇಲೆ ಭ್ರಷ್ಟಾಚಾರದ ಆರೋಪ ಯಾರೂ ಮಾಡಲಾಗಿಲ್ಲ. ಏಕೆಂದರೆ ಅಲ್ಲಿ ಆಡಳಿತ ಬಂಡವಾಳದಾರರಿಗೋ ಅಥವಾ ಲೂಟಿಕೋರರಿಗೋ ನಡೆಯುವುದಿಲ್ಲ. ಅಲ್ಲಿ ಆಯಾರಾಂ-ಗಯಾರಾಂಗಳಿಗೆ ಅವಕಾಶವಿಲ್ಲ. ಅದೇ ರೀತಿ ತ್ರಿಪುರ-ಕೇರಳದಲ್ಲೂ ಆಡಳಿತ ಎನ್ನುವುದು ದುಡಿಯುವ ಜನರಿಗಾಗಿ ಇದೆ.
* ಕರ್ನಾಟಕವನ್ನು ಉಳಿಸಲು-ಅಂದರೆ ನೆಲ-ಜಲ-ಜನ-ಪರಿಸರ-ಸಂಪನ್ಮೂಲಗಳನ್ನು ರಕ್ಷಿಸಲು ಲೂಟಿಕೋರರಿಂದ ಸಾಧ್ಯವಿಲ್ಲ. ಭ್ರಷ್ಟತೆಯನ್ನು ಬೈದರಷ್ಟೇ ಸಾಲದು. ಪರ್ಯಾಯ ಬೇಕು.
* ಪರ್ಯಾಯ ಚುನಾವಣಾ ಪದ್ಧತಿಗೆ, ಪ್ರಾಮಾಣಿಕ ರಾಜಕೀಯ ಪರ್ಯಾಯಕ್ಕೆ, ಜನರ ಹಕ್ಕುಗಳ ರಕ್ಷಣೆಗಾಗಿ ಸಿಪಿಐ(ಎಂ) ಪಕ್ಷದ ಜನಪರ ನೀತಿಗಳನ್ನು ಬೆಂಬಲಿಸಿ.
ದುಷ್ಟರ ಅಟ್ಟಹಾಸಕ್ಕೆ ಶಿಷ್ಟರ ಮೌನವೂ ಕಾರಣ
2 ಕಾಮೆಂಟ್‌ಗಳು:
ಬ್ಲಾಗ್ ಉದ್ದೇಶ ಚೆನ್ನಾಗಿದೆ. ಕಾಣಿಸಿರುವ ಚಿತ್ರಗಳೂ ಬಿಡಿ ಬಿಡಿಯಾಗಿ ನೋಡಲು ಚೆನ್ನಾಗಿದೆ. ಆದರೆ ಬ್ಲಾಗ್ ತುಂಬ ತುಂಬಿಕೊಂಡು ಓದಲು ಅಡ್ಡಿಯನ್ನುಂಟುಮಾಡುತ್ತಿವೆ. ಅಷ್ಟೇ ಅಲ್ಲ. ಕಪ್ಪು ಹಿನ್ನೆಲೆಯಲ್ಲಿ ಬಣ್ಣ ಬಣ್ಣದ ಅಕ್ಷರಗಲು ಕಣ್ಣಿಗೆ ಹಿತವಲ್ಲ. ಓದಲು ಸಹಕರಿಸುವುದಿಲ್ಲ. ನೋಡುವ ಬ್ಲಾಗ್ ಗಳೇ ಬೇರೆ. ನಮಗೆ ಇದು ಓದುವ ಬ್ಲಾಗ್ ಆಗಬೇಕು. ದಯಮಾಡಿ ಸರಳವಾಗಿ ವಿನ್ಯಾಸಗೊಳಿಸಿ. ಇದು ನನ್ನ ಮನವಿ.
very bad government in karnataka
ಕಾಮೆಂಟ್ ಪೋಸ್ಟ್ ಮಾಡಿ