ಅಮೇರಿಕ ಸಂಯುಕ್ತ ಸಂಸ್ಥಾನದ ಅಧ್ಯಕ್ಷ ಬರಾಕ್ ಒಬಾಮ ಭಾರತಕ್ಕೆ ಬರುತ್ತಿದ್ದಾರೆ. ನವ-ಪ್ರತಿಗಾಮಿ ಬುಷ್ ಆಡಳಿತದ ನಂತರ, ಮೊದಲ ಆಫ್ರೋ-ಅಮೇರಿಕನ್ ಆಗಿ ಅಧಿಕಾರಕ್ಕೆ ಬಂದದ್ದರಿಂದ ಸಕಾರಾತ್ಮಕ ಬದಲಾವಣೆಗಳ ಬಗ್ಗೆ ನಿರೀಕ್ಷೆಗಳಿದ್ದವು. ಆದರೆ ಇವಾವುವೂ ಈಡೇರಿಕೆಯಾಗಲಿಲ್ಲ.
ಇಂತಹ ಸಂದರ್ಭದಲ್ಲಿ ನವೆಂಬರ್ 8, 2010ರಂದು ದೇಶವ್ಯಾಪಿ ಪ್ರತಿಭಟನೆಯನ್ನು ನಡೆಸಲು ಎಡಪಕ್ಷಗಳು ತೀರ್ಮಾನಿಸಿವೆ. ಸಂಯುಕ್ತ ರಾಷ್ಟ್ರವು ತನ್ನ ಜಾಗತಿಕ ಅಧಿಪತ್ಯದ ನೀತಿಗಳ ಭಾಗವಾಗಿ, ರಾಷ್ಟ್ರೀಯ ಸಾರ್ವಭೌಮತೆ ಮತ್ತು ಹಲವಾರು ದೇಶಗಳ ಜನತೆಯ ಹಿತಾಸಕ್ತಿಗಳಿಗೆ ವಿರುದ್ಧವಾದ ನೀತಿಗಳನ್ನು ಅನುಸರಿಸುತ್ತಿದೆ. ಭಾರತಕ್ಕೆ ಸಂಬಂಧಿಸಿದಂತೆ ಅಮೇರಿಕವು, ವ್ಯೂಹಾತ್ಮಕ ಹೊಂದಾಣಿಕೆಯ ಹೆಸರಿನಲ್ಲಿ ಜನತೆಯ ಹಿತಾಸಕ್ತಿಗಳಿಗೆ ವಿರುದ್ಧವಾದ ಆರ್ಥಿಕ ನೀತಿಗಳನ್ನು ಅನುಸರಿಸಬೇಕೆಂದು ಸರ್ಕಾರದ ಮೇಲೆ ಅಕ್ರಮಣಕಾರಿಯಾದ ಒತ್ತಡಗಳನ್ನು ಹೇರುತ್ತಿದೆ.
ಜಾಗತಿಕವಾಗಿ ಮತ್ತು ಭಾರತಕ್ಕೆ ಸಂಬಂಧಿಸಿಯೂ ಸಂಯುಕ್ತ ರಾಷ್ಟ್ರ ಅಮೇರಿಕವು ನಿರ್ವಹಿಸುತ್ತಿರುವ ಪಾತ್ರಕ್ಕೆ ಸಂಬಂಧಿಸಿ ಆಳುವ ಕೂಟದ ಅಧಿಕೃತ ದೃಷ್ಟಿಕೋನಕ್ಕೆ ಭಿನ್ನವಾಗಿ ಎಡಪಕ್ಷಗಳು ಭಾರತದ ವಿಶಾಲ ಜನಸಮೂಹಗಳ ಅಭಿಪ್ರಾಯಗಳನ್ನು ಮುಂದಿಡಲು ಬಯಸುತ್ತವೆ.
ನವೆಂಬರ್ 8ರಂದು ಪ್ರತಿಭಟನೆಯ ದಿನ ಎಡಪಕ್ಷಗಳು ಕೆಳಕಂಡ ವಿಷಯಗಳನ್ನು ಎತ್ತಿತೋರಿಸಲಿವೆ :-
- ಭೂಪಾಲ್ ಅನಿಲ ದುರಂತದ ಸಂತ್ರಸ್ತರಿಗೆ ನ್ಯಾಯ ; ಆಗಿರುವ ನಷ್ಟಕ್ಕೆ ಪರಿಹಾರ ಮತ್ತು ಫ್ಯಾಕ್ಟರಿ ಸ್ಥಳವನ್ನು ಡೌ ಕೆಮಿಕಲ್ಸ್ ಸರಿಪಡಿಸುವಂತೆ ಮಾಡಬೇಕು; ಅಮೇರಿಕವು ವಾರೆನ್ ಆಂಡರ್ ಸನ್ ನನ್ನು ವಿಚಾರಣೆಗೊಳಪಡಿಸಲು ಭಾರತಕ್ಕೆ ಹಸ್ತಾಂತರಿಸಬೇಕು.
- ಕೃಷಿ, ಚಿಲ್ಲರೆ ವ್ಯಾಪಾರ, ಶಿಕ್ಷಣ ಮತ್ತು ಇತರೆ ಸೇವೆಗಳನ್ನು ಅಮೇರಿಕದ ಬಂಡವಾಳ ಮತ್ತು ಬಹುರಾಷ್ಟ್ರೀಯ ಕಂಪನಿಗಳಿಗೆ ತೆರೆಯಬೇಕೆಂದು ಒತ್ತಡ ಹಾಕುವುದನ್ನು ಹಾಗೂ ಭಾರತದ ವಿದೇಶಾಂಗ ನೀತಿ ಮೇಲೆ ಅಮೇರಿಕ ಒತ್ತಡ ಹಾಕುವುದನ್ನು ನಿಲ್ಲಿಸಬೇಕು.
- ಭಾರತವನ್ನು ಅಮೇರಿಕದ ಮಿಲಿಟರಿ ಪಾಲುದಾರನನ್ನಾಗಿ ಮಾರ್ಪಡಿಸುವ ಭಾರತ-ಅಮೇರಿಕ ರಕ್ಷಣಾ ಚೌಕಟ್ಟು ಒಪ್ಪಂದವನ್ನು ರದ್ದುಪಡಿಸಬೇಕು. ಅಮೇರಿಕದ ನ್ಯೂಕ್ಲಿಯರ್ ಸರಬರಾಜುದಾರರ ಮೇಲಿನ ಪರಮಾಣು ಭಾದ್ಯತಾ ಹಕ್ಕನ್ನು ಭಾರತ ಬಿಟ್ಟುಕೊಡಬೇಕೆಂಬ ಒತ್ತಡವನ್ನು ನಿಲ್ಲಿಸಬೇಕು.
- ಇರಾಕ್ ನಲ್ಲಿರುವ 50,000 ಸೈನಿಕರನ್ನು ಕೂಡಲೇ ಹಿಂದಕ್ಕೆ ಕರೆಸಿಕೊಳ್ಳಬೇಕು ; ಆಫ್ಘನಿಸ್ತಾನದಲ್ಲಿ ಒಂದು ಸ್ವತಂತ್ರ ಮತ್ತು ತಟಸ್ಥ ರಾಜ್ಯವನ್ನು ಸ್ಥಾಪಿಸಲು ರಾಜಕೀಯ ಪರಿಹಾರವನ್ನು ಕಾಣಬೇಕು ಮತ್ತು ತಕ್ಷಣದಲ್ಲೇ ಅಮೇರಿಕ-ನ್ಯಾಟೋ ಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳಬೇಕು.
- ಕ್ಯೂಬಾ ಮೇಲಿನ ಅಮೇರಿಕದ ನಿರ್ಬಂಧವನ್ನು ಕೊನೆಗಾಣಿಸಬೇಕು ; ಆಕ್ರಮಿತ ಪ್ಯಾಲೆಸ್ತೀನ್ ಮತ್ತು ಅರಬ್ ಪ್ರದೇಶಗಳಿಂದ ಖಾಲಿ ಮಾಡುವವರೆಗೆ ಇಸ್ರೇಲ್ಗೆ ಎಲ್ಲಾ ನೆರವನ್ನು ನಿಲ್ಲಿಸಬೇಕು.
ಮೇಲ್ಕಂಡ ಬೇಡಿಕೆಗಳ ಆಧಾರದಲ್ಲಿ ನವೆಂಬರ್ 8ರಂದು ಪ್ರತಿಭಟನೆಗಳನ್ನು ಮತ್ತು ರ್ಯಾಲಿಗಳನ್ನು ಸಂಘಟಿಸಲು ಎಡಪಕ್ಷಗಳು ಅಖಿಲ ಭಾರತ ಮಟ್ಟದಲ್ಲಿ ತಮ್ಮ ಎಲ್ಲಾ ಘಟಕಗಳಿಗೆ ಕರೆ ನೀಡುತ್ತವೆ. ಇದರ ಭಾಗವಾಗಿ ಬೆಂಗಳೂರಿನಲ್ಲಿ ಎಡಪಕ್ಷಗಳು ಸೇರಿದಂತೆ ಇತರೆ ಸಾಮ್ರಾಜ್ಯಶಾಹಿ ವಿರೋಧಿ ಸಂಘ-ಸಂಸ್ಥೆಗಳು, ಪ್ರಗತಿಪರರು, ಸೇರಿದಂತೆ ನವೆಂಬರ್ 8ರಂದು ಮೈಸೂರ್ ಬ್ಯಾಂಕ್ ವೃತ್ತದ ಬಳಿ ಮಧ್ಯಾಹ್ನ 3 ಘಂಟೆಗೆ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ. ಸಾಮ್ರಾಜ್ಯಶಾಹಿ ನೀತಿಗಳನ್ನು ವಿರೋಧಿಸುವವರು, ಜನ ಸಾಮಾನ್ಯರು ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ವಿನಂತಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ