ಅಮೇರಿಕ ಸಂಯುಕ್ತ ರಾಷ್ಟ್ರ ಸರ್ಕಾರ ಮತ್ತು ನೀರಿನ ವ್ಯಾಪಾರದ ಬಹುರಾಷ್ಟ್ರೀಯ ರಣಹದ್ದು ಕಂಪನಿಗಳ ನಿಯೋಗ, ನೀರಿನ ಮೇಲೆ ವ್ಯಾಪಾರದ ಹಕ್ಕನ್ನು ಸ್ಥಾಪಿಸುವ ಹವಣಿಕೆಯೊಂದಿಗೆ ಇಂದು ಮತ್ತು ನಾಳೆ (ಫೆ.28- ಮಾರ್ಚ್ 1) ಬೆಂಗಳೂರಿಗೆ ಭೇಟಿ ಮಾಡುತ್ತಿರುವುದು ತಮಗೆ ತಿಳಿದಿದೆ.
ಅಮೇರಿಕ ವಾಣಿಜ್ಯ ಇಲಾಖೆ ಪ್ರಕಟಿಸಿರುವ ಮಾಹಿತಿ ಪ್ರಕಾರ ಕರ್ನಾಟಕ ಸರ್ಕಾರದ ಮುಖ್ಯ ನೀತಿ ನಿರೂಪಕರು, ಅಧಿಕಾರಿಗಳು, ಸ್ಥಳೀಯ ಮುನಿಸಿಪಲ್ ಅಧಿಕಾರಿಗಳು ಮುಂತಾದವರೊಂದಿಗೆ ನಿಯೋಗ ಮಾತುಕತೆ ನಡೆಸಲಿದೆ. ಮುನಿಸಿಪಲ್ ತ್ಯಾಜ್ಯ ನೀರು ನಿರ್ವಹಣೆ, ನಗರ ನೀರು ಸರಬರಾಜು, ಕಚ್ಚಾ ನೀರು ಶುದ್ಧೀಕರಣ, ಕೊಳಚೆ ನೀರು ಶುದ್ಧೀಕರಣ, ಪ್ಯಾಕೇಜ್ಡ್ ಕುಡಿಯುವ ನೀರು ಇನ್ನೂ ಮುಂತಾದ ರಂಗಗಳಲ್ಲಿ ಅಮೇರಿಕದ ಕಂಪನಿಗಳಿಗೆ ಉತ್ತಮ ಅವಕಾಶಗಳನ್ನು ಒದಗಿಸಿಕೊಡುವ ವ್ಯಾಪಾರದ ಉದ್ಧೇಶ ಇದಕ್ಕಿದೆಯೆಂದು ಹೇಳಲಾಗಿದೆ.
ಅಲ್ಲದೆ ಮುಂದಿನ 5 ವರ್ಷಗಳಲ್ಲಿ ಭಾರತ ಸರ್ಕಾರದ ನೀರು ಸಂಪನ್ಮೂಲಗಳ ಸಚಿವಾಲಯವು ನೀರಿನ ಕ್ಷೇತ್ರದಲ್ಲಿ 50 ಬಿಲಿಯನ್ ಡಾಲರ್ಗಳನ್ನು (ಸುಮಾರು 2.25 ಲಕ್ಷ ಕೋಟಿ ರೂ.) ಹೂಡುವ ಯೋಜನೆಯಿದೆಯೆಂಬ ಬಗ್ಗೆ ಇವರ ಮಾಹಿತಿಯಲ್ಲಿ ವಿವರಿಸಲಾಗಿದೆ. ಜೊತೆಗೆ ಭಾರತದ ನೀರು ಮತ್ತು ಸಂಬಂಧಿತ ಸೇವೆಗಳ ಈಗಿನ ಮತ್ತು ಮುಂದೆ ಬೆಳೆಯುವ ಮಾರುಕಟ್ಟೆ ಮೌಲ್ಯವನ್ನು ಅಂದಾಜು ಮಾಡಲಾಗಿದೆ. ಆದ್ದರಿಂದ ಅಪಾರವಾದ ನೀರಿನ ಮಾರುಕಟ್ಟೆಯನ್ನು ಕಬಳಿಸುವ ಉದ್ದೇಶದೊಂದಿಗೆ ಅಮೇರಿಕದ ನಿಯೋಗ ಬೆಂಗಳೂರಿಗೆ ಮೊದಲ ಹೆಜ್ಜೆ ಇಡುತ್ತಿದೆ.
ಭಾರತದಲ್ಲಿ ಹೆಚ್ಚುತ್ತಿರುವ ನಗರೀಕರಣ ಮತ್ತು ಅದರ ಭಾಗವಾಗಿ ತೀವ್ರವಾಗಿ ವಿಸ್ತಾರಗೊಳ್ಳುತ್ತಿರುವ ಬೆಂಗಳೂರಿನ ಜನತೆಯ ಕುಡಿಯುವ ನೀರು ಮತ್ತು ನೀರಿನ ಇತರ ಸೇವೆಗಳ ಬೇಡಿಕೆಯನ್ನು ಹೇಗೆ ತಮ್ಮ ಲಾಭದ ವ್ಯಾಪಾರವಾಗಿ ಪರಿವರ್ತಿಸಿಕೊಳ್ಳಬೇಕೆಂದು ಅಮೇರಿಕ ಸರ್ಕಾರ ಮತ್ತು ಅವರ ಖಾಸಗಿ ಕಂಪನಿಗಳು ತೀರ್ಮಾನಿಸಿರುವುದನ್ನು ಸ್ಪಷ್ಟವಾಗಿ ಗುರುತಿಸಬಹುದು.
ಜನರಿಗೆ ಲಭ್ಯವಾಗುವ ಎಲ್ಲ ಸೇವೆಗಳನ್ನೂ ಖಾಸಗೀಕರಿಸಿ, ಎಲ್ಲದಕ್ಕೂ ಸೇವಾ ಶುಲ್ಕಗಳನ್ನು (User Charges) ವಸೂಲಿ ಮಾಡಬೇಕೆನ್ನುವ ನವ-ಉದಾರವಾದಿ ಜಾಗತಿಕ ನೀತಿಗಳ ಭಾಗವಾಗಿ ಇಂತಹ ಪ್ರಯತ್ನ ನಡೆದಿದೆ. ವಿದೇಶೀ ಬಂಡವಾಳಕ್ಕೆ ಅನಿಯಂತ್ರಿತ ಪ್ರವೇಶವಿರಬೇಕೆನ್ನುವ ವಿಶ್ವಬ್ಯಾಂಕ್ ಮತ್ತು ಜಾಗತಿಕ ಕಂಪನಿಗಳ ಹಿತಾಸಕ್ತಿ ಇದರಲ್ಲಿ ಸ್ಪಷ್ಟವಾಗಿದೆ. ಕೃಷಿಗೆ ಸಂಬಂಧಿಸಿ ವಿಶ್ವಬ್ಯಾಂಕ್ ನ ಧೋರಣಾ ಪತ್ರದಲ್ಲಿ, ಮಾರಾಟವಾಗಬಲ್ಲ ನೀರಿನ ಹಕ್ಕುಗಳಲ್ಲಿ ಮಾರುಕಟ್ಟೆಗಳನ್ನು ನಿರ್ಮಾಣ ಮಾಡಬೇಕೆಂದು ಶಿಫಾರಸ್ಸು ಮಾಡಲಾಗಿದೆ. ಇದಕ್ಕೆ ಪೂರಕವಾಗಿಯೇ ಯುಪಿಎ ಮೊದಲ ಸರ್ಕಾರದ ಭಾರತ ಅಮೇರಿಕ ಕೃಷಿ ಜ್ಞಾನ ಮುತುವರ್ಜಿ (Indo- US Agri Knowledge Initiative) ಯ ಭಾಗವಾಗಿ ರೂಪಿಸಲಾದ ಬೋರ್ಡ್ ನ ವರ್ಕಿಂಗ್ ಪ್ಲಾನ್ನಲ್ಲಿ ವಾಲ್ ಮಾರ್ಟ್ ಮತ್ತು ಮಾನ್ಸೆಂಟೋ ಕಂಪನಿಗಳು ಇತರ ಅಂಶಗಳೊಂದಿಗೆ ನೀರಿನ ನಿರ್ವಹಣೆಯಲ್ಲಿ ಮಾರುಕಟ್ಟೆ ಧೋರಣೆಯನ್ನು ಅನುಸರಿಸಬೇಕೆಂಬ ಸಲಹೆಯನ್ನು ನೀಡಿವೆ. ಇವೆಲ್ಲವೂ ಭಾರತ-ಅಮೇರಿಕ ಸಿಇಓ ಫೋರಂ ನೀಡಿರುವ 24 ಶಿಫಾರಸ್ಸುಗಳು ಮತ್ತು ಟ್ರೇಡ್ ಪಾಲಿಸಿ ಫೋರಂ ಸಲ್ಲಿಸಿರುವ ವರದಿಗಳಲ್ಲಿ ಹೇಳಿರುವುದರ, ಅಂದರೆ ಭಾರತದ ಮಾರುಕಟ್ಟೆಯನ್ನು ಅಮೇರಿಕದ ಬಂಡವಾಳ ಮತ್ತು ಕಂಪನಿಗಳು ವಶಪಡಿಸಿಕೊಳ್ಳುವುದರ, ನೀಲನಕ್ಷೆಯಾಗಿದೆ.
ದೇಶದಲ್ಲೂ ಮತ್ತು ಕರ್ನಾಟಕದಲ್ಲೂ ಈಗಾಗಲೇ ನೀರಿನ ಖಾಸಗೀಕರಣಕ್ಕೆ ಪ್ರಯತ್ನಗಳು ನಡೆದಿವೆ. ರಾಜ್ಯದಲ್ಲಿ ಧಾರವಾಡ, ಮೈಸೂರು, ಹುಬ್ಬಳ್ಳಿ, ಬೆಳಗಾಂ ಮತ್ತು ಗುಲ್ಬರ್ಗದಲ್ಲಿ ಕುಡಿಯುವ ನೀರಿನ್ನು ಅಂಶಿಕವಾಗಿ ಖಾಸಗಿ ನಿರ್ವಹಣೆಗೆ ಕೊಡಲಾಗಿದೆ. ಜನರ ಜೀವನಾವಶ್ಯಕ ಹಕ್ಕಾದ ನೀರನ್ನು ಮಾರಕಟ್ಟೆಯ ವಸ್ತುವನ್ನಾಗಿ ಪರಿವರ್ತಿಸಿ ಲೂಟಿ ಮಾಡಬೇಕೆನ್ನುವ ಬಂಡವಾಳಗಾರರ ಹಿತಾಸಕ್ತಿಯ ನೀತಿಗಳನ್ನು ಒಪ್ಪಿಕೊಂಡರೆ ಜನರ ಬದುಕು ಮತ್ತಷ್ಟು ದುಸ್ತರವಾಗುವುದರಲ್ಲಿ ಸಂದೇಹವೇ ಇಲ್ಲ.
ಈಗಾಗಲೇ ಕುಡಿಯುವ ಪ್ಯಾಕೇಜ್ಡ್ ಬಾಟಲ್ ನೀರಿನ ಮಾರುಕಟ್ಟೆಯನ್ನು ಕೊಕಾಕೋಲ ಮತ್ತು ಪೆಪ್ಸಿ ಕಂಪನಿಗಳು ಆವರಿಸಿಕೊಂಡಿವೆ. ಇವು ದುಬಾರಿ ಬೆಲೆಯ ಮೂಲಕ ಜನರಿಂದ ಸುಲಿಗೆ ಮಾಡುತ್ತಿವೆ. ಜೊತೆಗೆ ಸ್ಥಳೀಯ ಖಾಸಗಿ ನೀರಿನ ವ್ಯಾಪಾರಸ್ಥರಿಗೆ ಅಕ್ರಮವಾಗಿ ಅವಕಾಶ ಕೊಟ್ಟಿರುವುದರಿಂದ ಬಡವರಿಗೆ ನೀರು ದುಬಾರಿಯಾಗುತ್ತಿದೆ. ಇವೆಲ್ಲವನ್ನೂ ತಡೆಗಟ್ಟಿ ನಿಯಂತ್ರಿಸಬೇಕಾದ ಸರ್ಕಾರ ಖಾಸಗೀಕರಣಕ್ಕೆ ಮುಂದಾಗುತ್ತಿದೆ. ಈ ಹಿನ್ನೆಲೆಯಲ್ಲೇ ಜನವರಿಯಲ್ಲಿ ಮುನಿಸಿಪಾಲಿಕಾ-2011 ಎಂಬ ಸಮ್ಮೇಳನವನ್ನು ನಡೆಸಲಾಗಿದೆ. ಖಾಸಗಿ-ಸಾರ್ವಜನಿಕ ಪಾಲುದಾರಿಕೆಯನ್ನು (PPP) ಉತ್ತೇಜಿಸಲು ನಾಗರಿಕ ಸೇವೆಗಳನ್ನು ಗುತ್ತೇದಾರಿ ಹಾಗೂ ಬಹುರಾಷ್ಟ್ರೀಯ ಕಂಪನಿಗಳ ಕಪಿಮುಷ್ಟಿಗೆ ಒಪ್ಪಿಸಿ ಜನತೆಯನ್ನು ಸಂಕಷ್ಟಕ್ಕೆ ದೂಡುವ ಉದ್ದೇಶವನ್ನು ಇದು ಹೊಂದಿದೆ.
ಇದು ಜನತೆ ಮತ್ತು ಲೂಟಿಕೋರರ ನಡುವಿನ ಸಂಘರ್ಘದ ಪ್ರಶ್ನೆಯಾಗಿದೆ. ಮಾತ್ರವಲ್ಲ, ಪ್ರಜಾಪ್ರಭುತ್ವ ಮತ್ತು ಮಾರುಕಟ್ಟೆಯ ನಡುವಿನ ಹೋರಾಟವಾಗಿದೆ. ಅಮೇರಿಕದ ಕಂಪನಿಗಳು ಮತ್ತು ರಾಜ್ಯ ಸರ್ಕಾರ ನೀರಿನ ವ್ಯಾಪಾರಕ್ಕೆ ಮುಂದಾದಲ್ಲಿ ನಿಜವಾದ ಪ್ರಜಾಪ್ರಭುತ್ವ ಮತ್ತು ಪ್ರಜಾಪ್ರಭುತ್ವೀಯ ಸಂಸ್ಥೆಗಳು ಅಪಾಯಕ್ಕೊಳಗಾಗಲಿವೆ. ಏಕೆಂದರೆ ಅಮೇರಿಕದ ಕಂಪನಿಗಳು ಬರುತ್ತಿರುವುದು ಜನತೆಯ ಹಿತಾಸಕ್ತಿಯಿಂದಲ್ಲ. ಲಾಭಕ್ಕಾಗಿ ವ್ಯಾಪಾರಿ ದೃಷ್ಟಿಯಿಂದ.
ನೀರಿನ ಖಾಸಗೀಕರಣ ಜನವಿರೋಧಿ ಕ್ರಮವಾಗಿರುವ ಹಿನ್ನೆಲೆಯಲ್ಲಿ ಅಮೇರಿಕದ ಟ್ರೇಡ್ ಮಿಷನ್ ನ ಭೇಟಿಯನ್ನು ಮತ್ತು ರಾಜ್ಯ ಸರ್ಕಾರ ಇಂತಹ ಒಪ್ಪಂದಗಳಿಗೆ ಮುಂದಾಗುವುದನ್ನು ನಾವು ವಿರೋಧಿಸುತ್ತೇವೆ. ಸರ್ಕಾರ ಈ ನಿಟ್ಟನಲ್ಲಿ ತಾನು ನಡೆಸುತ್ತಿರುವ ಪ್ರಯತ್ನಗಳನ್ನು ಕೈಬಿಡಬೇಕೆಂದು ಒತ್ತಾಯಿಸುತ್ತೇವೆ.
ಎಂ.ನಾಗರಾಜ್, ಪ್ರಧಾನ ಕಾರ್ಯದರ್ಶಿ, ಬೆಂ.ನಗರ, ಜನತಾದಳ (ಜಾತ್ಯಾತೀತ)
ಪ್ರಕಾಶ್ ಕೆ., ಬೆಂಗಳೂರು ಜಿಲ್ಲಾ ಕಾರ್ಯದರ್ಶಿ, ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ)
ಎಂ.ಡಿ.ಹರಿಗೋವಿಂದ್, ಬೆಂಗಳೂರು ಜಿಲ್ಲಾ ಕಾರ್ಯದರ್ಶಿ, ಭಾರತ ಕಮ್ಯುನಿಸ್ಟ್ ಪಕ್ಷ
ಮಾವಳ್ಳಿ ಶಂಕರ್, ರಾಜ್ಯ ಸಂಚಾಲಕರು, ದಲಿತ ಸಂಘರ್ಘ ಸಮಿತಿ (ಅಂಬೇಡ್ಕರ್ ವಾದ)
ಸೈಯದ್ ಮಹಮ್ಮದ್ ಇಕ್ಬಾಲ್, ಜಂಟಿ ಸಂಚಾಲಕರು, ಕರ್ನಾಟಕ ಮುಸ್ಲಿಂ ಮುತ್ತೈಹಿದ ಮಹಾಝ್
ಸರ್ದಾರ್ ಅಹಮದ್ ಖುರೇಷಿ, ಅಧ್ಯಕ್ಷರು, ಟಿಪ್ಪು ಸುಲ್ತಾನ್ ಸಂಯುಕ್ತ ರಂಗ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ