ಪತ್ರಿಕಾಗೋಷ್ಟಿಗೆ ಟಿಪ್ಪಣಿ
ರಾಜ್ಯ ಮಟ್ಟದ ಭ್ರಷ್ಟಾಚಾರ ವಿರೋಧಿ ಸಮಾವೇಶ
16 ಜುಲೈ 2011 ಶನಿವಾರ
ಭ್ರಷ್ಟಾಚಾರ ಹಾವಳಿ ಇಡೀ ದೇಶವನ್ನೇ ಕಾಡುತ್ತಿದೆ. ಅದರಲ್ಲೂ ಉನ್ನತ ಅಧಿಕಾರದಲ್ಲಿರುವ ಮಂತ್ರಿ ಮಹೋದಯರು, ದೊಡ್ಡ ಬಂಡವಾಳಗಾರರು ಮತ್ತು ಅಧಿಕಾರಿಗಳು ಶಾಮೀಲಾಗಿ ದೇಶದ ಸಂಪತ್ತನ್ನೇ ಕೊಳ್ಳೆ ಹೊಡೆಯುತ್ತಿದ್ದು, ಜನಸಾಮಾನ್ಯರ ಮೇಲೆ ಹೊರೆ ಹಾಕಲಾಗುತ್ತಿದೆ. ಹಲವು ಹಗರಣಗಳು ಪ್ರತಿದಿನ ಬಯಲಾಗುತ್ತಿವೆ. ಭ್ರಷ್ಟಾಚಾರದ ಕುರಿತು ಸಾರ್ವಜನಿವಾಗಿ ಚರ್ಚೆಗಳು ವ್ಯಾಪಕವಾಗಿ ನಡೆಯುತ್ತಿವೆ. ಅದರಲ್ಲೂ ಅಣ್ಣಾ ಹಜಾರೆ ಅವರ ನೇತೃತ್ವದ ಪ್ರತಿಭಟನೆಗಳಿಗೆ ಮಾದ್ಯಮಗಳ ವಿಶೇಷ ಪ್ರಚಾರವು ಜನರ ಗಮನ ಸೆಳೆದಿವೆ. ಭ್ರಷ್ಟಾಚಾರದಲ್ಲಿ ತೊಡಗಿರುವವರ ಮೇಲೆ ಕಠಿಣ ಕ್ರಮ ಜರುಗಿಸುವ ವ್ಯವಸ್ಥೆಯನ್ನು ಲೋಕಪಾಲ್ ಸಂಸ್ಥೆಯನ್ನು ರೂಪಿಸುವ ಅವಶ್ಯಕತೆ ಕುರಿತು ಗಂಭೀರ ಸಮಾಲೋಚನೆಗಳು ಆರಂಭವಾಗಿವೆ.
ಲೋಕಪಾಲ್ ವ್ಯವಸ್ಥೆ ಅಗತ್ಯ ಕುರಿತು ಚರ್ಚೆ ಇಂದು ನಿನ್ನೆಯದಲ್ಲ. 1969 ರಲ್ಲೇ ಆಡಳಿತ ಸುದಾರಣಾ ಆಯೋಗವು ಲೋಕಪಾಲ್ ವ್ಯವಸ್ಥೆಯನ್ನು ರೂಪಿಸಿ ಭ್ರಷ್ಟಾಚಾರದ ನಿಗ್ರಹ ಮಾಡಲು ಶಿಫಾರಸ್ಸು ಮಾಡಲಾಗಿತ್ತು. ಕಳೆದ 42 ವರ್ಷಗಳಲ್ಲಿ ಆಗಿ ಹೋಗಿರುವ ಹಲವು ಸರಕಾರಗಳು ಭ್ರಷ್ಟಾಚಾರದ ವಿರುದ್ದ ದೃಡವಾದ ಕಾನೂನು ರೂಪಿಸುವ ರಾಜಕೀಯ ಇಚ್ಚಾಶಕ್ತಿಯನ್ನು ತೋರಿಸಿಲ್ಲವೆಂಬುದು ಸತ್ಯ ಸಂಗತಿಯಾಗಿದೆ. ಉದಾರೀಕಣ ನೀತಿಗಳು ಜಾರಿಯಾದ ನಂತರ ಭ್ರಷ್ಟಾಚಾರದ ಹಗರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಸರಕಾರಗಳು ಹವಾಲ ಮಾರ್ಗದ ಮೂಲಕ ಕಪ್ಪು ಹಣ ವ್ಯವಹಾರ, ಕಾರ್ಗಿಲ್ ಯುದ್ದದಲ್ಲಿ ಅಮರರಾದ ಸೈನಿಕರ ಶವಗಳನ್ನು ಅವರ ಕುಟುಂಬಗಳಿಗೆ ಸಾಗಿಸುವ ಸಲುವಾಗಿ ಖರೀದಿ ಮಾಡಿದ ಶವಪಟ್ಟಿಗೆಗಳ ಖರೀದಿಯಲ್ಲಿ ಭಾರಿ ಅವ್ಯವಹಾರ, ಹುಡ್ಕೋ ಮೂಲಕ ಬಡವರಿಗೆ ಮನೆಗಳನ್ನು ನಿರ್ಮಾಣದ ಹೆಸರಲ್ಲಿ ಸಾವಿರಾರು ಕೋಟಿ ಲೂಟಿ, ಮಂತ್ರಿಗಳ ಐಶರಾಮಿ ಮೋಜು ಮಜಾಗಳಿಗೆ ಸರಕಾರದ ಖಜಾನೆಯಿಂದ ಹಣದ ಪೋಲು ಮಾಡಿದ್ದೂ ಅಲ್ಲದೇ ಇತ್ತೀಚಿಗೆ 2ಜಿ ತರಂಗಾತರ ಹಂಚಿಕೆಯಲ್ಲಿ ಲಕ್ಷಾಂತರ ಕೋಟಿ ಅವ್ಯವಹಾರವು ಒಬ್ಬನಾದ ಮೇಲೆ ಮತ್ತೊಬ್ಬ ಕೇಂದ್ರ ಮಂತ್ರಿ ರಾಜಿನಾಮೆ ನೀಡುವಂತಾಗಿರುವುದು. ಕಾಮನ್ ವೆಲ್ತ್ ಗೇಮ್ಸ್ ನಡೆಸುವ ಹೆಸರಲ್ಲಿ ಸಾರ್ವಜನಿಕ ಹಣದ ಲೂಟಿ ಈಗೀಗ ಬಯಲಾಗುತ್ತಿರುವ ಕೃಷ್ಣಾ-ಗೋದಾವರಿ (ಕೆ-ಜಿ) ಬೇಸಿನ್ ನಲ್ಲಿ ರಿಲಯನ್ಸ್ ಸಂಸ್ಥೆಗೆ ನೀಡಿರುವ ಪರವಾನಿಗೆಗಳಲ್ಲಿ ಅವ್ಯವಹಾರಗಳು ಜನತೆಯನ್ನು ಕಂಗಾಲಾಗಿಸಿವೆ. ಕರ್ನಾಟಕ ರಾಜ್ಯದಲ್ಲಿ ಭ್ರಷ್ಟಾಚಾರವು ಬಿಜೆಪಿ ಸರಕಾರದ ನಿತ್ಯ ಕಾಯಕವಾಗಿ ಆಡಳಿತ ನಡೆದಿದೆ.
ಭ್ರಷ್ಟಾಚಾರದ ವಿರುದ್ದ ಎಡ ಪಕ್ಷಗಳಾದ ಸಿಪಿಐ(ಎಂ), ಸಿಪಿಐ, ಫಾರ್ವಡ್ ಬ್ಲಾಕ್ ಪಕ್ಷಗಳು ರಾಜಿ ಇಲ್ಲದ ಹೋರಾಟದಲ್ಲಿ ತೊಡಗಿಸಿಕೊಂಡು ಜನಸಾಮಾನ್ಯರ ಧ್ವನಿಯಾಗಿ ದುಡಿಯುತ್ತಿವೆ. ಕೇಂದ್ರದಲ್ಲಿ ವಿ.ಪಿ.ಸಿಂಗ್ ಸರಕಾರದಲ್ಲಿದ್ದಾಗ ಲೋಕಪಾಲ್ ಮಸೂದೆಯನ್ನು ರಚಿಸಿ ಪಾರ್ಲಿಮೆಂಟ್ ನಲ್ಲಿ ಮಂಡಿಸಲು ಒತ್ತಾಯಿಸಲಾಗಿತ್ತು. ನಂತರದಲ್ಲಿ 1996 ರಲ್ಲಿ ರಾಷ್ಟ್ರೀಯ ರಂಗ ಸರಕಾರ ಎಡ ಪಕ್ಷಗಳ ಬೆಂಬಲದಲ್ಲಿ ರಚನೆಯಾದಾಗ ಸಾಮಾನ್ಯ ಕನಿಷ್ಟ ಕಾರ್ಯಕ್ರಮದಲ್ಲಿಯೂ ಈ ವಿಷಯಕ್ಕೆ ಒತ್ತು ನೀಡಿತ್ತು. ಅಲ್ಲದೇ ಕಾಂಗ್ರೇಸ್ ನೇತೃತ್ವದ ಯುಪಿಎ 1 ಸರಕಾರಕ್ಕೆ ಬೆಂಬಲ ನೀಡಿದಾಗಲೂ ಎಡ ಪಕ್ಷಗಳು ಭ್ರಷ್ಟಾಚಾರ ನಿಯಂತ್ರಣ ಮಾಡಲು ಸಾಮಾನ್ಯ ಕಾರ್ಯಕ್ರಮದಲ್ಲಿ ಒತ್ತು ನೀಡಿ ಪ್ರಧಾನ ಮಂತ್ರಿ ಒಳಗೊಂಡತೆ ಲೋಕಪಾಲ್ ಕಾನೂನು ಜಾರಿಗೊಳಿಸಲು ರಾಜಕೀಯ ಹೋರಾಟ ನಡೆಸಲಾಗಿದೆ. ಆದರೆ ಕಾಂಗ್ರೇಸ್ ಪಕ್ಷ ಭ್ರಷ್ಟಾಚಾರ ಕುರಿತು ಕಠಿಣ ಕ್ರಮಗಳನ್ನು ಕೈಗೊಳ್ಳಲು ಮುಂದಾಗದೇ ತಪ್ಪಿತಸ್ಥರನ್ನು ವರ್ಷಗಟ್ಟಲೆ ಅಧಿಕಾರದಲ್ಲಿ ಮುಂದುವರೆಯಲು ಅವಕಾಶ ನೀಡಿ ತನ್ನ ರಾಜಕೀಯ ನಿರಾಸಕ್ತಿಯನ್ನು ತೋರುತ್ತಾ ಬಂದಿದೆ. ಬಿಜೆಪಿಯು ವಿರೋಧ ಪಕ್ಷವಾಗಿ ಭ್ರಷ್ಟಾಚಾರದ ವಿಚಾರದ ದ್ವಂದ್ವ ನೀತಿಯನ್ನು ಅನುಸರಿಸುತ್ತಾ ಬಂದಿದೆ. ವಿರೋಧ ಪಕ್ಷವಾಗಿದ್ದಾಗ ಭ್ರಷ್ಟಾಚಾರ ವಿರುದ್ದ ವೀರಾವೇಶದ ಮಾತುಗಳನ್ನು ಆಡುವ ಬಿಜೆಪಿ ಅಧಿಕಾರದಲ್ಲಿದ್ದಾಗ ಭ್ರಷ್ಟಾಚಾರವೇ ಆಡಳಿತವಾಗಿ ನಡೆದುಕೊಳ್ಳುತ್ತಿರುವುದು ಅದರ ಗೋಸುಂಬೆತನದ ರಾಜಕೀಯವನ್ನು ಬಯಲು ಮಾಡುತ್ತದೆ.
ಚುನಾವಣೆಗಳಲ್ಲಿ ನಡೆಯುತ್ತಿರುವ ಭೃಷ್ಟಾಚಾರ ದಿನೇ ದಿನೇ ಹೆಚ್ಚುತ್ತಿದೆ. ಸಾಮಾನ್ಯ ಜನರು ಚುನಾವಣೆಗೆ ಸ್ಪರ್ದಿಸುವಂತಿಲ್ಲ. ಆಪರೇಷನ್ ಕಮಲದ ಹೆಸರಿನಲ್ಲಿ ನಡೆಯುತ್ತಿರುವ ಪಕ್ಷಾಂತರವು ಪ್ರಜಾಪ್ರಭುತ್ವದ ಅಣಕವಾಗಿದೆ. ಈ ಹಿನ್ನೆಲೆಯಲ್ಲಿ ಆಮೂಲಾಗ್ರ ಚುನಾವಣೆ ಸುಧಾರಣೆ ಅಗತ್ಯವಾಗಿದೆ. ವಿಶೇಷವಾಗಿ ಚುನಾವಣೆಯಲ್ಲಿ ಹಣದ ಬಳಕೆಯನ್ನು ನಿರ್ಭಂದಿಸಲು 'ಅನುಪಾತದ ಆಧಾರದಲ್ಲಿ ಪ್ರಾತಿನಿಧ್ಯ' ಪದ್ದತಿಯನ್ನು ಜಾರಿಗೊಳಿಸಬೇಕು.
ಹಾಗೆಯೇ ವಿದೇಶದಲ್ಲಿರುವ ಕಪ್ಪು ಹಣ ಹಾಗೂ ಕಾನೂನು ಬಾಹಿರವಾದ ಹಣವನ್ನು ದೇಶಕ್ಕೆ ವಾಪಾಸು ತರಲು ಕ್ರಮ ಕೈಗೊಳ್ಳಬೇಕು. ಆ ಮೂಲಕ ಬಡತನ ಹೋಗಲಾಡಿಸುವ ಯೋಜನೆಗಳನ್ನು ರೂಪಿಸಬಹುದು.
ಭ್ರಷ್ಟಾಚಾರದ ನಿರ್ಮೂಲನೆಗೆ ಸಮಗ್ರವಾದ ರಾಜಕೀಯ, ಕಾನೂನಾತ್ಮಕ, ಆಡಳಿತಾತ್ಮಕ ಹಾಗೂ ನ್ಯಾಯಾಂಗ ವ್ಯವಸ್ಥೆಗಳ ಬದಲಾವಣೆಗಳು ಅಗತ್ಯವಾಗಿವೆ. ಕೇವಲ ಅರೆಕೊರೆ ಕ್ರಮಗಳಿಂದ ಸಾಧ್ಯವಿಲ್ಲ. ಅದರಲ್ಲಿ ಪರಣಾಮಕಾರಿ ಲೋಕಪಾಲ್ ಒಂದು ಮುಖ್ಯ ಕ್ರಮವಾಗಿದೆ. ಇದರೊಂದಿಗೆ ರಾಷ್ಟ್ರೀಯ ನ್ಯಾಯಾಂಗ ಆಯೋಗ ಮೂಲಕ ಉನ್ನತ ನ್ಯಾಯಾಂಗದ ನೇಮಕಾತಿ ಉಸ್ತುವಾರಿ, ಭ್ರಷ್ಟಾಚಾರದ ಮತ್ತೊಂದು ಮೂಲವಾಗಿರುವ ಚುನಾವಣೆಗಳಲ್ಲಿ ಭಾರಿ ಹಣದ ಪ್ರಭಾವದ ನಿಯಂತ್ರಣ, ತೆರಿಗೆ ನೀತಿಗಳ ಮೂಲಕ ಕೆಲವು ಪ್ರಭಾವಿ ಕಂಪನಿಗಳು ದುರ್ಲಾಭ ಪಡೆಯುವುದನ್ನು ಒಳಗೊಂಡು ಕಪ್ಪು ಹಣ ಬಯಲಿಗೆಳೆಯುವುದು ಅಗತ್ಯವಾಗಿದೆ. ಅಲ್ಲದೇ ದೊಡ್ಡ ವ್ಯಾಪಾರಿಗಳ-ರಾಜಕೀಯ ವ್ಯಕ್ತಿಗಳ- ಅಧಿಕಾರಶಾಹಿಯ ಶಾಮೀಲು ನಿಗ್ರಹಿಸಲು ಕಠಿಣ ಕ್ರಮಗಳು ಕೈಗೊಳ್ಳಬೇಕು.
ಭ್ರಷ್ಟಾಚಾರವೆಂದರೆ ಲಂಚ ತೆಗೆದುಕೊಳ್ಳುವವರು-ಕೊಡುವವರು ಒಳಗೊಂಡಿರುತ್ತಾರೆ. ಜನ ಸಾಮಾನ್ಯರ ಮಟ್ಟದಲ್ಲಿ ನಡೆಯುವ ವ್ಯವಹಾರದಲ್ಲಿ ಕಾನೂನು ಬದ್ದವಾದ, ನ್ಯಾಯವಾದ ಕೆಲಸಗಳು ಮಾಡಿಸಿಕೊಳ್ಳಲು ಲಂಚ ನೀಡುವ ಒತ್ತಡಕ್ಕೆ ಜನರು ಒಳಗಾಗುತ್ತಾರೆ. ಆದರೆ ದೊಡ್ಡ ಪ್ರಮಾಣದ ವ್ಯಾಪಾರಿಗಳ/ಕಂಪನಿಗಳ ವಿಷಯದಲ್ಲಿ ಉನ್ನತ ಸ್ಥಾನಗಳಲ್ಲಿರುವವರ ಲಂಚಕೋರತನದ ಜೊತೆಗೆ ಅವರ ಸಹಕಾರದಿಂದ ಅಕ್ರಮವಾದ ಲಾಭ ಪಡೆಯಲು ಲಂಚ ನೀಡುವವರ ಸ್ಥಾಪಿತ ಹಿತಾಸಕ್ತಿಗಳೇ ಪ್ರಧಾನ ಪಾತ್ರ ವಹಿಸುತ್ತವೆ ಎಂಬುದು ಎಲ್ಲರೂ ತಿಳಿದ ವಿಷಯವಾಗಿದೆ. ಭ್ರಷ್ಟಾಚಾರ ತಡೆ ಕಾಯ್ದೆ 1988 ರಲ್ಲಿ ವ್ಯಕ್ತಿಗಳ ಮೇಲೆ ತನಿಖೆ ಕ್ರಮಗಳ ಬಗ್ಗೆ ಪ್ರಸ್ಥಾಪವಿದೆ. ಆದರೆ ಕಂಪನಿಗಳ ಮೂಲಕ ನಡೆಯುವ ಅವ್ಯವಹಾರದ ಕುರಿತು ಸ್ಪಷ್ಟವಾಗಿಲ್ಲ. ಕೆಲವು ನೂರು ಕೋಟಿಗಳು ಲಂಚ ಪಡೆದಿರುವ ವ್ಯಕ್ತಿಗಳನ್ನು ಬಂಧನಕ್ಕೆ ಗುರಿಪಡಿಸಿರುವುದು ಸ್ವಾಗತಾರ್ಹವಾಗಿದೆ. ಆದರೆ ಲಕ್ಷಗಟ್ಟಲೆ ಕೋಟಿ ರೂಪಾಯಿಗಳ ನುಂಗಿಹಾಕಿರುವ ಕಂಪನಿಗಳು ಅನಿರ್ಭಂದಿತವಾಗಿವೆ. ಆದ್ದರಿಂದ ವ್ಯಕ್ತಿಗಳ ಜೊತೆ ಕಂಪನಿಗಳ/ಬಂಡವಾಳಗಾರರನ್ನು ಒಳಗೊಂಡು ಭ್ರಷ್ಟಾಚಾರ ನಿಯಂತ್ರಣಕ್ಕೆ ತರಬೇಕು.
ಲೋಕಪಾಲ್ ಸಂಸ್ಥೆಯು ಅರೆ ನ್ಯಾಯಾಂಗ ಅಧಿಕಾರ ಹೊಂದಿರಬೇಕು, ಪಾರದರ್ಶಕವಾಗಿ, ಸ್ವತಂತ್ರವಾಗಿ ಮತ್ತು ಕಾಲ ಮಿತಿಯಲ್ಲಿ ಕಾರ್ಯನಿರ್ವಹಿಸಬೇಕು. ಲೋಕಪಾಲ್ ಸಂಸ್ಥೆಯು ಅಧ್ಯಕ್ಷರನ್ನಲ್ಲದೆ 10 ಸದಸ್ಯರು ಒಳಗೊಂಡಿರಬೇಕು. ಇದರಲ್ಲಿ ಯಾವುದೇ ರಾಜಕೀಯ ವ್ಯಕ್ತಿಗಳು ಒಳಗೊಳ್ಳಬಾರದು ಹಾಗೆಯೆ ಯಾವುದೇ ಕೈಗಾರಿಕೋದ್ಯಮಿ/ಬಂಡವಾಳಗಾರರು/ದೊಡ್ಡ ವ್ಯಾಪಾರಿಗಳು ಒಳಗೊಳ್ಳಬಾರದು. 1989ರ ಲೋಕಪಾಲ್ ಕರಡು ಹಾಗೂ 2001 ರಲ್ಲಿ ಪ್ರಣಬ್ ಮುಖರ್ಜಿ ಅವರ ನೇತೃತ್ವದ ಪಾರ್ಲಿಮೆಂಟರಿ ಸ್ಥಾಯಿ ಸಮಿತಿ ಒಪ್ಪಿರುವಂತೆಯೆ ಪ್ರಧಾನ ಮಂತ್ರಿಗಳು ಲೋಕಪಾಲ್ ಸಂಸ್ಥೆಯ ವ್ಯಾಪ್ತಿಗೆ ಒಳಪಡಬೇಕು. ಉನ್ನತ ನ್ಯಾಯಾಂಗದ ನ್ಯಾಯಮೂರ್ತಿಗಳ ಮೇಲೆ ಕ್ರಮ ಜರುಗಿಸಲು ಈಗಿರುವ ಗೋಜಲು ವಿಧಾನ ಬದಲಾಗಿ ಸರಳವಾಗಿ ತಪ್ಪಿತಸ್ತರ ಮೇಲೆ ಕ್ರಮವಹಿಸುವ ಅಧಿಕಾರವಿರುವ ನ್ಯಾಯಾಂಗ ಆಯೋಗದ ರಚನೆ ಮೂಲಕ ನೇಮಕಾತಿ ಹಾಗೂ ಭ್ರಷ್ಟಾಚಾರ ನಿಯಂತ್ರಣದ ಕ್ರಮವಹಿಸಲು ಪ್ರತ್ಯೇಕ ಕಾನೂನು ಅಗತ್ಯವಾಗಿದೆ.
ಪ್ರಮುಖವಾಗಿ ಸಂವಿಧಾನದ ಪರಚ್ಚೇದ 105ರ ಅಡಿಯಲ್ಲಿ ಪಾರ್ಲಿಮೆಂಟ್ ಸದಸ್ಯರಿಗೆ ಇರುವ ಮತದಾನ ಹಾಗೂ ಮಾತನಾಡುವ ಸ್ವಾತಂತ್ರವು ಖಾತ್ರಿ ಪಡಿಸುವಾಗಲೇ ಈ ಸ್ವಾತಂತ್ರವು ಭ್ರಷ್ಟಾಚಾರಕ್ಕೆ ಎಡೆಮಾಡಿ ಕೊಡಬಾರದು. ಈಗಾಗಲೇ ಬಯಲಿಗೆ ಬಂದಿರುವಂತೆ ಪ್ರಶ್ನೆಗಳನ್ನು ಕೇಳಲು ಲಂಚ ಪಡೆದಿರುವುದು, ಆಪರೇಷನ್ ಕಮಲದಂತಹ ಭ್ರಷ್ಟಾಚಾರಗಳನ್ನು ನಿಯಂತ್ರಿಸುವಂತಿರಬೇಕು. ಅದಕ್ಕಾಗಿ ಪ್ರತ್ಯೇಕ ಕಾನೂನು ರಚಿಸಬೇಕು.
ದೂರು ನೀಡುವ ವ್ಯಕ್ತಿಗಳಿಗೆ ರಕ್ಷಣೆ ನೀಡಲು ಲೋಕಪಾಲ್ ಸಂಸ್ಥೆಗೆ ಪರಿಣಾಮಕಾರಿ ಅಧಿಕಾರವಿರಬೇಕು. ಹಾಗೆಯೇ ರಾಜ್ಯ ಮಟ್ಟಗಳಲ್ಲಿ ಲೋಕಪಾಲ್ ಮಾದರಿಯ ಅಧಿಕಾರಗಳೊಂದಿಗೆ ಲೋಕಾಯುಕ್ತ ಸಂಸ್ಥೆಗಳನ್ನು ಸ್ಥಾಪಿಸಬೇಕು. ಮತ್ತೊಂದು ಮುಖ್ಯ ಅಂಶವೆಂದರೇ ಭ್ರಷ್ಟಾಚಾರದ ಮೂಲ ಏನು? ಎಂಬುದು ತನಿಖೆಗೆ ಒಳಪಡಬೇಕು. ಕಂಪನಿಗಳು/ದೊಡ್ಡ ಬಂಡವಾಳಗಾರರು ಲೈಸೆನ್ಸ್, ಗುತ್ತಿಗೆ ಮತ್ತು ಒಪ್ಪಂದಗಳ ಮುಲಕ ಅಕ್ರಮವೆಸಗುತ್ತಿರುವಾಗ ಅಂತಹವರಿಂದ ಭ್ರಷ್ಟಾಚಾರದ ಮೂಲಕ ಗಳಿಸಿದ ಸಂಪತ್ತನ್ನು ಮುಟ್ಟುಗೋಲು ಹಾಕಿಕೊಳ್ಳಲು ನ್ಯಾಯಾಲಯಕ್ಕೆ ಶಿಫಾರಸ್ಸು ಮಾಡುವ ಹಾಗೂ ಅಂತಹ ಕಂಪನಿಗಳನ್ನು ಕಪ್ಪು ಪಟ್ಟಿಗೆ ಸೇರಿಸಲು ಅಧಿಕಾರವಿರಬೇಕು.
ಮೇಲಿನ ಎಲ್ಲಾ ಅಂಶಗಳ ಆಧಾರದಲ್ಲಿ ಎಡ ಪಕ್ಷಗಳಾದ ಸಿಪಿಐ(ಎಂ), ಸಿಪಿಐ, ಫಾರ್ವಡ್ ಬ್ಲಾಕ್ ಪಕ್ಷಗಳು ದೇಶದಾದ್ಯಂತ್ಯ ಭ್ರಷ್ಟಾಚಾರ ವಿರೋಧಿ ಚಳುವಳಿಯನ್ನು ದಿನಾಂಕ 15-21 ಜುಲೈ 2011 ರಂದು ನಡೆಸಲು ಕರೆ ನೀಡಿವೆ. ಅದರ ಭಾಗವಾಗಿ ದಿನಾಂಕ 16-7-2011 ರಂದು ರಾಜ್ಯ ಮಟ್ಟದ ಭ್ರಷ್ಟಾಚಾರ ವಿರೋಧಿ ಸಮಾವೇಶವನ್ನು ಬೆಂಗಳೂರಿನ ಎನ್.ಜಿ.ಒ ಹಾಲ್ನಲ್ಲಿ ನಡೆಸಲಾಗುತ್ತದೆ. ಈ ಸಮಾವೇಶದಲ್ಲಿ ರಾಷ್ರ್ಟೀಯ ನಾಯಕರಾದ ಸಿಪಿಐ ಪಕ್ಷದ ಉಪ ಪ್ರಧಾನ ಕಾರ್ಯದರ್ಶಿ ಕಾಂ:ಸುರವರಂ ಸುದಾಕರ ರೆಡ್ಡಿ ಅವರು ಹಾಗೂ ಸಿಪಿಐ (ಎಂ) ಮತ್ತು ಫಾರ್ವಡ್ ಬ್ಲಾಕ್ ರಾಜ್ಯ ಮುಖಂಡರು ಭಾಗವಹಿಸುತ್ತಾರೆ. ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಲು ವಿನಂತಿ.
ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ)
ಭಾರತ ಕಮ್ಯೂನಿಸ್ಟ್ ಪಕ್ಷ
ಫಾರ್ವಡ್ ಬ್ಲಾಕ್
ಕರ್ನಾಟಕ ರಾಜ್ಯ ಘಟಕಗಳು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ